ಟ್ರಂಪ್‌ರಿಂದ ಪರಮಾಣು ಬೆದರಿಕೆ: ಹಿಲರಿ
ನ್ಯೂಯಾರ್ಕ್, ಸೆ. 27: ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಸುಲಭವಾಗಿ ಪ್ರಚೋದನೆಗೊಳಗಾಗುವವರಾಗಿದ್ದಾರೆ, ಹಾಗಾಗಿ, ಪರಮಾಣು ಕೋಡ್‌ಗಳ ಸಮೀಪ ಅವರ ಬೆರಳುಗಳು ಇರದಂತೆ ನೋಡಿಕೊಳ್ಳಬೇಕಾಗಿದೆ ಎಂದು ಚುನಾವಣೆಯಲ್ಲಿ ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಹೇಳಿದ್ದಾರೆ.
ಆ ಮೂಲಕ, ಟ್ರಂಪ್ ಅಮೆರಿಕದ ಮುಂದಿನ ಅಧ್ಯಕ್ಷರಾಗಲು ಅರ್ಹರಲ್ಲ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಪ್ರಥಮ ಮಹಾ ಬೆದರಿಕೆಯಾಗಿರುವ ಪರಮಾಣು ಅಸ್ತ್ರಗಳ ಬಗ್ಗೆ ಟ್ರಂಪ್ ಹೊಂದಿರುವ ‘ಉಡಾಫೆ’ಯ ಧೋರಣೆ ಭಾರೀ ಕಳವಳಕ್ಕೆ ಕಾರಣವಾಗಿದೆ ಎಂದು 68 ವರ್ಷದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೇಳಿದರು.
ತಾನು ಆಯ್ಕೆಯಾದರೆ, ತನ್ನ ಮಿತ್ರ ದೇಶಗಳ ಬಗ್ಗೆ ಅಮೆರಿಕ ಹೊಂದಿರುವ ಬದ್ಧತೆಗೆ ಬದ್ಧವಾಗುವುದಾಗಿ ಹಿಲರಿ ಮಿತ್ರ ದೇಶಗಳಿಗೆ ಭರವಸೆ ನೀಡಿದರು.
‘‘ಪರಮಾಣು ಶಸ್ತ್ರಗಳ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿರುವುದನ್ನು ನಾವು ಕೇಳಿದ್ದೇವೆ. ಜಪಾನ್, ದಕ್ಷಿಣ ಕೊರಿಯ, ಸೌದಿ ಅರೇಬಿಯ ಮುಂತಾದ ದೇಶಗಳು ಪರಮಾಣು ಅಸ್ತ್ರಗಳನ್ನು ಪಡೆದರೆ ತನಗೇನೂ ಸಮಸ್ಯೆಯಿಲ್ಲ ಎಂಬುದಾಗಿ ಅವರು ಪದೇ ಪದೇ ಹೇಳಿದ್ದಾರೆ. ಪರಮಾಣು ಶಸ್ತ್ರಗಳ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಡೆಮಾಕ್ರಟ್‌ಗಳು ಮತ್ತು ರಿಪಬ್ಲಿಕನ್ನರು ಸೇರಿದಂತೆ ಅಮೆರಿಕದ ನೀತಿಯಾಗಿದೆ’’ ಎಂದು ಹಿಲರಿ ನುಡಿದರು.
ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಸೋಮವಾರ ಇಲ್ಲಿ ನಡೆದ ಮುಖಾಮುಖಿ ಚರ್ಚೆಯಲ್ಲಿ ಹಿಲರಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.