ಮೊಹಾಲಿಯಲ್ಲಿ ಮೊಮ್ಮಗ ಕಿವೀಸ್‌ನ ಬೌಲರ್ ಸೋಧಿ ಭೇಟಿಗೆ ಕಾಯುತ್ತಿರುವ ಅಜ್ಜಿ ಕೌರ್
ಹೊಸದಿಲ್ಲಿ, ಸೆ.27: ನ್ಯೂಝಿಲೆಂಡ್ ಕ್ರಿಕೆಟ್ ತಂಡ ಭಾರತದ ವಿರುದ್ಧ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ಟೆಸ್ಟ್ ,ಏಕದಿನ ಸರಣಿಯ ಪಂದ್ಯಗಳನ್ನು ಆಡುವಾಗ ಭಾರತದಲ್ಲಿರುವ 80ರ ಹರೆಯದ ವೃದ್ಧೆ ಗುರ್‌ದೀಪ್ ಕೌರ್ ಸೋಧಿ ಮಾತ್ರ ತಂಡದಲ್ಲಿರುವ ತನ್ನ ಮೊಮ್ಮಗನ ಹಿತಕ್ಕಾಗಿ ಪ್ರಾರ್ಥಿಸಲಿದ್ದಾರೆ.
ಕಿವೀಸ್ ತಂಡದಲ್ಲಿರುವ ಲೆಗ್ ಸ್ಪಿನ್ನರ್ ಐಶ್ ಸೋಧಿ (ಇಂದರ್‌ಬೆರ್ ಸಿಂಗ್ ಸೋಧಿ) ಅವರು ಗುರ್‌ದೀಪ್ ಕೌರ್ ಸೋಧಿ ಮೊಮ್ಮಗ. ಆಕೆ ತನ್ನ ಮೊಮ್ಮಗನ ಬರವಿಗಾಗಿ ಕಾಯುತ್ತಿದ್ದಾರೆ. ಆದರೆ ಸೋದರತ್ತೆಯರು ಐಶ್ ಸೋಧಿ ಅವರನ್ನು ಸೆ.14ರಂದು ಭೇಟಿಯಾಗಿ ಶುಭ ಹಾರೈಸಿದ್ದಾರೆ.
23ರ ಹರೆಯದ ಬೌಲರ್ ಐಶ್ ಸೋಧಿ ಅವರು ಹುಟ್ಟಿದ್ದು ಲೂಧಿಯಾನದಲ್ಲ್ಲಿ. ಬಳಿಕ ನ್ಯೂಝಿಲೆಂಡ್‌ಗೆ ತೆರಳಿ ಅಲ್ಲಿನ ದೇಶಿಯ ಕ್ರಿಕೆಟ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡವರು.
‘‘ ಐಶ್ ನ್ಯೂಝಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವುದು ದೊಡ್ಡ ಸಾಧನೆ. ಸೆ.14ರಂದ ಆತ ಭಾರತಕ್ಕೆ ಆಗಮಿಸುತ್ತಿದ್ದಂತೆ ನನ್ನಲ್ಲಿ ಮಾತನಾಡಿದ್ದ. ತನ್ನ ಹಿತಕ್ಕಾಗಿ ಪ್ರಾರ್ಥಿಸುವಂತೆ ಕೇಳಿಕೊಂಡಿದ್ದ. ನಾನು ಕುಟಂಬದ ಸದಸ್ಯರೊಂದಿಗೆ ಟಿವಿ ಮೂಲಕ ಭಾರತ-ನ್ಯೂಝಿಲೆಂಡ್‌ಗಳ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದೆ. ಬೆಳಗ್ಗೆ ಆರು ಗಂಟೆಗೆ ಎದ್ದು ಮೊಮ್ಮಗನ ಒಳಿತಿಗಾಗಿ ಪ್ರಾರ್ಥಿಸುತ್ತಿದ್ದೆ. ಆತನ ಚೆನ್ನಾಗಿ ಆಡುವಂತೆ ವಿಶೇಷ ಪ್ರಾರ್ಥನೆ ಮಾಡಿರುವುದಾಗಿ ಐಶ್ ಸೋಧಿ ಅಜ್ಜಿ ಗುರ್‌ದೀಪ್ ಕೌರ್ ಸೋಧಿ ತಿಳಿಸಿದ್ದಾರೆ.
‘‘ನಾನು ನನ್ನ ದೇಶವನ್ನು ಪ್ರೀತಿಸುವೆ. ನನ್ನ ಮೊಮ್ಮಗ ಕ್ರಿಕೆಟ್‌ನಲ್ಲಿ ಚೆನ್ನಾಗಿ ಆಡಲಿ ಎಂದು ಸದಾ ಹಾರೈಸುತ್ತಿದ್ದೇನೆ. ಇಷ್ಟರ ತನಕ ಚೆನ್ನಾಗಿ ಆಡಿದ್ದಾನೆ. ಮೂರು ವಿಕೆಟ್‌ಗಳನ್ನು ಪಡೆದಿದ್ದಾನೆ. ಮುರಳಿ ವಿಜಯ್, ಕೆಎಲ್ ರಾಹುಲ್ ಮತ್ತು ಚೇತೇಶ್ವರ ಪೂಜಾರ ವಿಕೆಟ್ ಉಡಾಯಿಸಿದ್ದಾನೆ’’ ಎಂದು ಮೊಮ್ಮಗನ ಬಗ್ಗೆ ಎಂದು ನಿವೃತ್ತ ಶಿಕ್ಷಕಿಯಾಗಿರುವ ಗುರ್‌ದೀಪ್ ಕೌರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 23ರಂದು ಮೊಹಾಲಿಯಲ್ಲಿ ನಡೆಯಲಿರುವ ಮೂರನೆ ಏಕದಿನ ಪಂದ್ಯದ ವೇಳೆ ಅಜ್ಜಿ ಮೊಮ್ಮಗನ ಭೇಟಿ ನಿಗದಿಯಾಗಿದೆ. ಒಂದು ವರ್ಷದ ಮೊದಲು ಗುರುದೀಪ್ ಕೌರ್ ಅವರು ಮೊಮ್ಮಗನನ್ನು ಭೇಟಿಯಾಗಿದ್ದರು. ಕಳೆದ ವರ್ಷ ನ್ಯೂಝಿಲೆಂಡ್ ಟ್ವೆಂಟಿ-20 ವಿಶ್ವಕಪ್ ಆಡಲು ಬಂದಿದ್ದ ವೇಳೆ ಅಜ್ಜಿ ಕೌರ್ ಅವರು ಚಂಡೀಗಡದ ಹೋಟೆಲ್‌ನಲ್ಲಿ ಮೊಮ್ಮಗನ ಭೇಟಿಯಾಗಿದ್ದರು.
‘‘ ನಾನು ಐಶ್‌ಗೆ ರೊಟ್ಟಿ ಸೇರಿದಂತೆ ಅವನಿಗೆ ಇಷ್ಟದ ಆಹಾರವನ್ನು ಕೊಂಡೊಯ್ಯಲು ಬಯಸಿರುವೆ. ಆದರೆ ತಂಡದ ಮ್ಯಾನೇಜ್‌ಮೆಂಟ್ ಹೊರಗಿನಿಂದ ಆಹಾರ ಪಡೆಯಲು ಆತನಿಗೆ ಅವಕಾಶ ನೀಡದು’’ ಎಂದು ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿರುವ ಕೌರ್ ಅವರು ಸೋಧಿ ಎಸೆಯುವ ಪ್ರತಿಯೊಂದು ಎಸೆತವನ್ನು ಆಸಕ್ತಿಯಿಂದ ಗಮನಿಸಿ ಕಮೆಂಟ್ ಮಾಡುತ್ತಾರೆ.
ಐಶ್ ಅವರ ಸೋದರತ್ತೆಯರಾದ ಜಸ್‌ಕಿರಣ್ ರಾಂಪಾಲ್ ಮತ್ತು ಪುನೀತ್ ಸೋಧಿ, ಪುನೀತ್ ಅವರ ಗಂಡ ಡಾ.ಅಮರ್‌ಬಿರ್ ಸಿಂಗ್ ಸೆ.14ರಂದು ಅಳಿಯ ಐಶ್ ಅವರನ್ನು ಭೇಟಿಯಾಗಿ ಶುಭ ಹಾರೈಸಿದ್ದಾರೆ.
ನ್ಯೂಝಿಲೆಂಡ್‌ನಲ್ಲಿ ಐಶ್ ಹೆತ್ತವರು
ಐಶ್ ಸೋಧಿ ತಂದೆ ರಾಜ್‌ಬೀರ್ ಸಿಂಗ್ ಸೋಧಿ ಅವರು ವೃತ್ತಿಯಲ್ಲಿ ವೈದ್ಯರು. ತಾಯಿ ಸಿಮ್ರಾತ್ ಸೋಧಿ. ಐಶ್ ಹೆತ್ತವರು 19 ವರ್ಷಗಳ ಹಿಂದೆ ಮಕ್ಕಳಾದ ಐಶ್ ಸೋಧಿ ಮತ್ತು ಸಿರಾತ್ ಜೊತೆಗೆ ನ್ಯೂಝಿಲೆಂಡ್‌ಗೆ ತೆರಳಿ, ಅಲ್ಲೆ ನೆಲೆ ಕಂಡುಕೊಂಡಿದ್ದರು. ಆದರೆ ಐಶ್ ಸೋಧಿ ಕುಟುಂಬ ನ್ಯೂಝಿಲೆಂಡ್‌ನಲ್ಲಿದ್ದರೂ, ಭಾರತದಲ್ಲಿರುವ ತಮ್ಮ ಬಂಧುಗಳ ಸಂಪರ್ಕವನ್ನು ಕಳೆದುಕೊಂಡಿಲ್ಲ. ‘‘ ಸೋಧಿ ತನ್ನ ಅಜ್ಜಿಯ ಬಗ್ಗೆ ವಿಶೇಷ ಮಮತೆ ಹೊಂದಿದ್ದಾರೆ. ತಾಯಿ ನೀಡಿದ್ದ ಪ್ರೋತ್ಸಾಹದಿಂದಾಗಿ ಕ್ರಿಕೆಟ್‌ನಲ್ಲಿ ಬೆಳೆಯಲು ಸಾಧ್ಯವಾಯಿತು. ಆಕೆ ಕ್ರಿಕೆಟ್ ವೀಕ್ಷಿಸುತ್ತಾ ನನ್ನ ಮಗನಿಗೆ ಪ್ರೋತ್ಸಾಹ ನೀಡುತ್ತಿದ್ದಳು. ಐಶ್ 11ರ ಹರೆಯದಲ್ಲಿ ವೃತ್ತಿಪರ ಕ್ರಿಕೆಟ್ ಆಸಕ್ತಿ ವ್ಯಕ್ತಪಡಿಸಿ, ಆ ನಿಟ್ಟಿನಲ್ಲಿ ಗಮನ ಹರಿಸಿದ್ದ’’ ಎಂದು ಐಶ್ ಸೋಧಿ ತಂದೆ ರಾಜ್‌ಬೀರ್ ಸಿಂಗ್ ಹೇಳಿದ್ದಾರೆ.
ಸೋಧಿ ಅವರ ನೆಚ್ಚಿನ ಆಟಗಾರರು ಡೇನಿಯಲ್ ವೆಟೋರಿ ಮತ್ತು ಅನಿಲ್ ಕುಂಬ್ಳೆ.