ಸಾರ್ಕ್ ಶೃಂಗ ಸಭೆಗೆ ಮೋದಿ ಇಲ್ಲ

Update: 2016-09-27 17:24 GMT

ಹೊಸದಿಲ್ಲಿ, ಸೆ.27: ಭಾರತ- ಪಾಕ್ ಮಧ್ಯೆ ಬಿಗುವಿನ ವಾತಾವರಣ ಹೆಚ್ಚುತ್ತಿರುವಂತೆಯೇ, ನವೆಂಬರ್‌ನಲ್ಲಿ ಇಸ್ಲಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದಿಲ್ಲ ಎಂದು ಭಾರತ ತಿಳಿಸಿದೆ. ಒಂದು ರಾಷ್ಟ್ರವು ಶೃಂಗಸಭೆ ಸುಸೂತ್ರವಾಗಿ ಸಾಗದಂತಹ ವಾತಾವರಣ ನಿರ್ಮಿಸಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
 ಗಡಿಯಾಚೆಗಿನ ಭಯೋತ್ಪಾದನೆ ಹೆಚ್ಚಿರುವುದು ಮತ್ತು ರಾಷ್ಟ್ರದ ಆಂತರಿಕ ವಿದ್ಯಮಾನಗಳಲ್ಲಿ ಸಾರ್ಕ್ ಸದಸ್ಯ ರಾಷ್ಟ್ರವೊಂದರ ಹಸ್ತಕ್ಷೇಪವು ನವೆಂಬರ್‌ನಲ್ಲಿ ಇಸ್ಲಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ದೇಶಗಳ 19ನೇ ಶೃಂಗ ಸಭೆ ಸುಸೂತ್ರವಾಗಿ ನಡೆಯದಿರುವಂತಹ ಸ್ಥಿತಿಗೆ ಕಾರಣವಾಗಿದೆ ಎಂದು ‘ಸಾರ್ಕ್’ ಅಧ್ಯಕ್ಷ ರಾಷ್ಟ್ರ ನೇಪಾಳಕ್ಕೆ ತಿಳಿಸಲಾಗಿದೆ ಎಂದು ವಿದೇಶ ವ್ಯವಹಾರ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನೂ ಕೆಲವು ಸದಸ್ಯ ರಾಷ್ಟ್ರಗಳು ಪಾಲ್ಗೊಳ್ಳುವ ಬಗ್ಗೆ ತಮ್ಮ ಆಯ್ಕೆಯನ್ನು ಕಾದಿರಿಸಿವೆ ಎಂದೂ ತಿಳಿಸಲಾಗಿದೆ. ಅಪ್‌ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಭೂತಾನ್ ಈ ದೇಶಗಳು ಎಂದು ಮೂಲಗಳು ತಿಳಿಸಿವೆ.
 ಪ್ರಾದೇಶಿಕ ಸಹಕಾರದ ವಿಷಯದಲ್ಲಿ ಭಾರತ ತನ್ನ ಬದ್ಧತೆಯನ್ನು ಮರೆಯುವುದಿಲ್ಲ. ಆದರೆ ಇದು ಉಗ್ರವಾದ ಮುಕ್ತ ಪರಿಸ್ಥಿತಿಯಲ್ಲಿ ಮುಂದುವರಿಯಬೇಕು ಎಂದು ಭಾರತ ನೇಪಾಳಕ್ಕೆ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News