‘ಥ್ರೀ ಪೇರೆಂಟ್’ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದ ಮುಸ್ಲಿಮ್ ದಂಪತಿ

Update: 2016-09-27 17:54 GMT

ಲಂಡನ್,ಸೆ.27: ಲಂಡನ್ ನಿವಾಸಿ ಮುಸ್ಲಿಮ್ ದಂಪತಿಗೊಂದು ಮಗು ಜನಿಸಿದೆ. ಮಕ್ಕಳೂ ಎಲ್ಲ ಕಡೆಯೂ ಹುಟ್ಟುತ್ತಾರೆ....ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ಮಗು ಕ್ರಾಂತಿಕಾರಿ ‘ಥ್ರೀ ಪೇರೆಂಟ್’ ತಂತ್ರಜ್ಞಾನವನ್ನು ಬಳಸಿ ಜನಿಸಿರುವ ವಿಶ್ವದ ಮೊದಲ ಮಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ತಂತ್ರಜ್ಞಾನವು ಮೂವರು ಜನ್ಮದಾತರ ಡಿಎನ್‌ಎ ಬಳಕೆಯನ್ನು ಒಳಗೊಂಡಿದೆ ಮತ್ತು ಈ ನೂತನ ತಂತ್ರಜ್ಞಾನದ ಮೂಲಕ ಧರೆಗಿಳಿದಿರುವ ಇಬ್ರಾಹಿಂ ಹಸನ್‌ಗೆ ಈಗ ಐದು ತಿಂಗಳ ಪ್ರಾಯ.
 ಜೋರ್ಡಾನ್ ಮೂಲದ ಮಹಮೂದ್ ಹಸನ್ ಮತ್ತು ಇಬ್ತಿಶಾಮ್ ಶಬಾನಾ ದಂಪತಿಯ ಇಬ್ಬರು ಮಕ್ಕಳು ಎಳವೆಯಲ್ಲಿಯೇ ಕಾಯಿಲೆಗೆ ಬಲಿಯಾದ ಬಳಿಕ ವರ್ಷಗಳ ಕಾಲ ಮಗುವಿಗಾಗಿ ಹಂಬಲಿಸುತ್ತಿದ್ದರು. ಶಬಾನಾ ಬೆಳೆಯುತ್ತಿರುವ ಮಕ್ಕಳ ನರಮಂಡಳಕ್ಕೆ ಹಾನಿಯನ್ನುಂಟು ಮಾಡುವ ಮಾರಣಾಂತಿಕ ಲೀಗ್ ಸಿಂಡ್ರೋಮ್‌ಗೆ ಕಾರಣವಾಗುವ ವಂಶವಾಹಿಯನ್ನು ಹೊಂದಿದ್ದು ಎಲ್ಲ ಸಮಸ್ಯೆಗಳಿಗೆ ಮೂಲವಾಗಿತ್ತು. ಈ ವಂಶವಾಹಿಯಿಂದಾಗಿ ಸಹಜ ಗರ್ಭಧಾರಣೆಯಿಂದ ಹುಟ್ಟುವ ಮಕ್ಕಳಿಗೆ ಈ ಕಾಯಿಲೆ ಬಳುವಳಿಯಾಗಿ ಬರುತ್ತದೆ ಮತ್ತು ಅಂತಿಮವಾಗಿ ಅವುಗಳ ಜೀವವನ್ನೇ ಬಲಿ ಪಡೆದುಕೊಳ್ಳುತ್ತದೆ.
ಈ ರೋಗಕ್ಕೆ ಕಾರಣವಾಗುವ ವಂಶವಾಹಿ ಮಾನವನ ಶರೀರದ ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸುವ ‘ಮಿಟೋಕಾಂಡ್ರಿಯಾ ’ದಲ್ಲಿನ ಡಿಎನ್‌ಎದಲ್ಲಿರುತ್ತದೆ. ಈ ಮಿಟೋಕಾಂಡ್ರಿಯಾ ಮಾನವನಿಗೆ ತಾಯಿಯಿಂದ ಬಳುವಳಿಯಾಗಿ ಬರುವ 37 ವಂಶವಾಹಿಗಳನ್ನಷ್ಟೇ ಹೊಂದಿರುತ್ತದೆ.
ಹೀಗಾಗಿ ಮಗುವೊಂದನ್ನು ಪಡೆಯಲು ಹಸನ್ ದಂಪತಿ ನ್ಯೂಯಾರ್ಕ್‌ನಲ್ಲಿರುವ ನ್ಯೂ ಹೋಪ್ ಫರ್ಟಿಲಿಟಿ ಸೆಂಟರ್‌ನ ಜಾನ್ ಝಾಂಗ್ ಮತ್ತು ಅವರ ತಂಡದ ಮೊರೆ ಹೋಗಿದ್ದರು.
ಝಾಂಗ್ ‘ಥ್ರೀ ಪೇರೆಂಟ್ ’ತಂತ್ರಜ್ಞಾನವನ್ನು ಬಳಸಿ ಮಿಟೋಕಾಂಡ್ರಿಯಾದ ಮೂಲಕ ಬರುವ ರೋಗವನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
  
ಈ ಪ್ರಕ್ರಿಯೆಯನ್ನು ನಿರ್ವಹಿಸಲು ಕೆಲವು ವಿಧಾನಗಳಿವೆ. ಬ್ರಿಟನ್‌ನಲ್ಲಿ ಅನುಮತಿ ಪಡೆದಿರುವ ವಿಧಾನವನ್ನು ‘ಪ್ರೊ ನ್ಯೂಕ್ಲಿಯರ್ ಟ್ರಾನ್ಸ್‌ಫರ್’ ಎಂದು ಕರೆಯಲಾಗುತ್ತದೆ. ಇಲ್ಲಿ ತಾಯಿಯಿ ಅಂಡ ಮತ್ತು ದಾನಿಯ ಅಂಡವನ್ನು ತಂದೆಯ ವೀರ್ಯಾಣುವಿನೊಂದಿಗೆ ಫಲದಾಯಕಗೊಳಿಸಲಾಗುತ್ತದೆ. ಫಲದಾಯಕಗೊಂಡ ಅಂಡಗಳು ಭ್ರೂಣದ ಆರಂಭದ ಹಂತಗಳಾಗಿ ವಿಭಜನೆಗೊಳ್ಳುವ ಮುನ್ನ ಪ್ರತಿ ಬೀಜಾಣುವನ್ನು ಹೊರತೆಗೆಯಲಾಗುತ್ತದೆ. ದಾನಿಯ ಫಲವತ್ತುಗೊಂಡ ಅಂಡವನ್ನು ತ್ಯಜಿಸಿ ಅದರ ಜಾಗದಲ್ಲಿ ತಾಯಿಯ ಫಲವತ್ತುಗೊಂಡ ಅಂಡವನ್ನು ಪ್ರತಿಷ್ಠಾಪಿ ಸಲಾಗುತ್ತದೆ. ಆದರೆ ಮುಸ್ಲಿಮ್ ಧರ್ಮಕ್ಕೆ ಸೇರಿದ ಹಸನ್ ದಂಪತಿ ಎರಡು ಭ್ರೂಣಗಳ ವಿನಾಶಕ್ಕೆ ವಿರುದ್ಧವಾಗಿದ್ದರಿಂದ ಈ ತಂತ್ರಜ್ಞಾನ ಅವರಿಗೆ ಸೂಕ್ತವಾಗಿರಲಿಲ್ಲ.
 ಹೀಗಾಗಿ ಝಾಂಗ್ ‘ಸ್ಪಿಂಡಲ್ ನ್ಯೂಕ್ಲಿಯರ್ ಟ್ರಾನ್ಸ್‌ಫರ್’ ಎಂಬ ಇನ್ನೊಂದು ವಿಧಾನವನ್ನು ಅನುಸರಿಸಲು ನಿರ್ಧರಿಸಿದ್ದರು. ಶಬಾನಾರ ಅಂಡಗಳಲ್ಲೊಂದರ ಬೀಜಾಣುವನ್ನು ಹೊರತೆಗೆದು ಅದನ್ನು ದಾನಿಯ ಅಂಡದಲ್ಲಿ ಸೇರಿಸಿದ್ದರು. ಈ ಅಂಡದ ಸ್ವಂತದ್ದಾದ ಬೀಜಾಣುವನ್ನು ಅವರು ಮೊದಲೇ ಹೊರತೆಗೆದಿದ್ದರು. ಇದರ ಪರಿಣಾಮವಾಗಿ ರೂಪುಗೊಂಡ ಶಬಾನಾರ ನ್ಯೂಕ್ಲಿಯರ್ ಡಿಎನ್‌ಎ ಮತ್ತು ದಾನಿಯ ಮಿಟೋಕಾಂಡ್ರಿಯಲ್ ಡಿಎನ್‌ಎ ಹೊಂದಿದ್ದ ಅಂಡವನ್ನು ಹಸನ್‌ರ ವೀರ್ಯಾಣು ವಿನೊಂದಿಗೆ ಬೆರೆಸಲಾಗಿತ್ತು. ಇದರ ಮೂಲಕ ಐದು ಭ್ರೂಣಗಳು ಸೃಷ್ಟಿಯಾ ಗಿದ್ದು,ಇವುಗಳ ಪೈಕಿ ಒಂದು ಮಾತ್ರ ಸಹಜವಾದ ಬೆಳವಣಿಗೆ ಹೊಂದಿತ್ತು. ಝಾಂಗ್ ತಂಡ್ ಇದನ್ನೇ ಶಬಾನಾರ ಗರ್ಭಕೋಶದಲ್ಲಿ ಸೇರಿಸಿದ್ದು, ಒಂಬತ್ತು ತಿಂಗಳ ಬಳಿಕ ಆರೋಗ್ಯಪೂರ್ಣ ಮಗುವಿನ ಜನನವಾಗಿತ್ತು.
ಅಂದ ಹಾಗೆ ಥ್ರೀ ಪೇರೆಂಟ್ ತಂತ್ರಜ್ಞಾನದ ಇವೆರಡೂ ವಿಧಾನಗಳಿಗೆ ಅಮೆರಿಕದಲ್ಲಿ ಅನುಮತಿಯಿಲ್ಲ. ಹೀಗಾಗಿ ಝಾಂಗ್ ಸಂಪೂರ್ಣ ಪ್ರಕ್ರಿಯೆಯನ್ನು ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲದ ಮೆಕ್ಸಿಕೋದಲ್ಲಿ ಪೂರ್ಣಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News