ಆಳ್ವಾಸ್ ನುಡಿಸಿರಿ-2016ರ ಸಮ್ಮೇಳನಾಧ್ಯಕ್ಷೆಯಾಗಿ ಡಾ.ಸುಮಿತ್ರಾಬಾಯಿ

Update: 2016-09-28 08:01 GMT

ಮಂಗಳೂರು, ಸೆ.28: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ವತಿಯಿಂದ 13ನೆ ವರ್ಷದ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಡಾ.ಬಿ.ಎನ್. ಸುಮಿತ್ರಾ ಬಾಯಿ ಆಯ್ಕೆಯಾಗಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ನುಡಿಸಿರಿ ಬಗ್ಗೆ ಮಾಹಿತಿ ನೀಡಿ, ‘ಕರ್ನಾಟಕ: ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯಲ್ಲಿ ನವೆಂಬರ್ 18ರಿಂದ 20ರವರೆಗೆ ನಡೆಯಲಿರುವ ನುಡಿಸಿರಿ ಸಮ್ಮೇಳನವನ್ನು ಡಾ. ಜಯಂತ ಗೌರೀಶ ಕಾಯ್ಕಿಣಿ ಉದ್ಘಾಟಿಸುವರು ಎಂದರು.
ಮೈಸೂರಿನಲ್ಲಿ ಜನಿಸಿ ಹಾಸನದಲ್ಲಿ ಬೆಳೆದ ಡಾ.ಬಿ.ಎನ್.ಸುಮಿತ್ರಾಬಾಯಿಯವರು ಸಂಸ್ಕೃತಭಾಷಾ ಪ್ರಾಧ್ಯಾಪಕಿಯಾಗಿ ನಿವೃತ್ತರಾಗಿದ್ದಾರೆ. ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಜೈನಶಾಸ್ತ್ರ ಮತ್ತು ಪ್ರಾಕೃತ ವಿಷಯವಾದ ಜಿನಸೇನನ ಹರಿವಂಶ ಪುರಾಣ ಒಂದು ಅಧ್ಯಯನಕ್ಕಾಗಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಸಂಶೋಧನಾ ವಿಷಯದ ಆಯ್ಕೆಗೆ ಸಂಬಂಧಿಸಿದಂತೆ ಎಚ್ಚರ ಮತ್ತು ಶಿಸ್ತನ್ನು ಅಳವಡಿಸಿಕೊಂಡಿರುವ ಇವರು ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರ ಅಧ್ಯಾಪನ ಕ್ಷೇತ್ರ ಕನ್ನಡವಲ್ಲದಿದ್ದರೂ ಅಧ್ಯಯನ ಕ್ಷೇತ್ರವಂತೂ ಅಪ್ಪಟ ಕನ್ನಡದ್ದು. ಬಹುಭಾಷಾ ಪಂಡಿತೆಯಾಗಿರುವ ಇವರು ಅನ್ಯ ಭಾಷಾ ತಿಳುವಳಿಕೆಗಳನ್ನು ಕನ್ನಡಕ್ಕೆ ತಂದು ಕನ್ನಡ ಭಾಷಾ ಶ್ರೀಮಂತಿಕೆಗೆ ಕಾರಣರಾದವರು. ಮಹಿಳಾ ಅಧ್ಯಯನ, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ, ಶಾಸ್ತ್ರಾಧ್ಯಯನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಇವರು ಕನ್ನಡದ ಮಹಿಳಾ ಬರವಣಿಗೆ, ಜೈನ ಧರ್ಮದ ದೇವತೆಗಳು, ಕನ್ನಡದಲ್ಲಿ ಬಂದ ಜೈನ ಮಹಾಭಾರತಗಳ ಕುರಿತ ಸಂಶೋಧನೆಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಿ ಕನ್ನಡದ ಕೀರ್ತಿ ವೃದ್ಧಿಸುವಂತೆ ಮಾಡಿದವರು. ಖ್ಯಾತ ವಿಮರ್ಶಕರಾಗಿ, ಸಂಶೋಧಕರಾಗಿ, ಕನ್ನಡದ ಸ್ತ್ರೀನಿಷ್ಠ ವಿಮರ್ಶೆಯ ಮುಂಚೂಣಿಯ ವಿಮರ್ಶಕರಾಗಿ ಡಾ.ಬಿ.ಎನ್.ಸುಮಿತ್ರಾಬಾಯಿ ಹೆಸರು ಪಡೆದಿದ್ದಾರೆ.
ಸಮಕಾಲೀನ ಕನ್ನಡ ಸಾಹಿತಿಗಳಲ್ಲಿ ಪ್ರಮುಖರಾಗಿರುವ ಡಾ.ಜಯಂತ ಗೌರೀಶ ಕಾಯ್ಕಿಣಿಯವರು ಮೂಲತ: ಉತತಿರ ಕನ್ನಡ ಜಿಲ್ಲೆಯ ಗೋಕರ್ಣದವರು. ಎಂ.ಎಸ್ಸಿ ಬಯೋಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದುಕೊಂಡ ಇವರು ಮುಂಬೈಯ ಕಂಪೆನಿಗಳಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದವರು. ತನ್ನ 19ನೇ ವಯಸ್ಸಿನಲ್ಲಿಯೇ ರಂಗದಿಂದೊಂದಿಷ್ಟು ದೂರ ಎನ್ನುವ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಇವರು ಒಟ್ಟು ನಾಲ್ಕು ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ. ಕವಿ, ಕತೆಗಾರ, ನಾಟಕಕಾರ, ಅಂಕಣ ಬರಹಗಾರರಾಗಿ, ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ಕ್ಷೇತ್ರದಲ್ಲಿಯೂ ಅಪಾರ ಯಶಸ್ಸನ್ನು ಕಂಡವರು ಎಂದು ಡಾ. ಮೋಹನ್ ಆಳ್ವ ವಿವರ ನೀಡಿದರು.
ನಾಡು-ನುಡಿಯ ಎಚ್ಚರವನ್ನು, ಕನ್ನಡ ಸಂಸ್ಕೃತಿಯ ಕಂಪನ್ನು ಪಸರಿಸುವುದಕ್ಕಾಗಿ ಆಯೋಜಿಸಲಾಗುವ ಈ ಸಮ್ಮೇಳನವು ಕನ್ನಡಿಗರ ಒಡಲ ಕನ್ನಡಗಂಗೆಯ ಅಂತರ್ವಾಹಿನಿಯನ್ನು ಎಚ್ಚರಿಸುವ, ಎಳೆಯರಲ್ಲಿ ಒಲವ ಸೆಲೆ ಮೂಡುವಂತೆ ಮಾಡುವ ಕಾರ್ಯದಲ್ಲಿ ಯಶಸ್ಸು ಕಂಡಿದೆ ಎಂದವರು ಹೇಳಿದರು.
ನುಡಿಸಿರಿ ಕಾರ್ಯಕ್ರಮಕ್ಕೆ ಕಳೆದ ವರ್ಷ ರಾಜ್ಯ ಸರಕಾರದಿಂದ 15 ಲಕ್ಷ ರೂ. ದೇಣಿಗೆ ಬಂದಿದೆ. ಈ ವರ್ಷವೂ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನುಡಿಸಿರಿಯ ಯಶಸ್ಸಿಗಾಗಿ ವಿವಿಧ ಕಡೆಗಳಲ್ಲಿ 80 ಘಟಕಗಳನ್ನು ಈಗಾಗಲೇ ತೆರೆಯಲಾಗಿದೆ ಎಂದು ಡಾ. ಮೋಹನ್ ಆಳ್ವ ತಿಳಿಸಿದರು.
ನುಡಿಸಿರಿ ಅಥವಾ ವಿರಾಸತ್‌ಗಾಗಿ ಸಂಸ್ಥೆಯ ಉಪನ್ಯಾಸಕರು ಅಥವಾ ವಿದ್ಯಾರ್ಥಿಗಳಿಂದ ದೇಣಿಗೆಯನ್ನು ಪಡೆಯುತ್ತಿಲ್ಲ. ಆದರೆ 100 ರೂ.ಗಳನ್ನು ಸ್ವ ಇಚ್ಛೆಯಿಂದ ನೀಡಿ ಸದಸ್ಯರಾಗಬಹುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮೋಹನ್ ಆಳ್ವ ಪ್ರತಿಕ್ರಿಯಿಸಿದರು.
ಗೋಷ್ಠಿಯಲ್ಲಿ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.

2018ರಲ್ಲಿ ‘ವಿಶ್ವ ನುಡಿಸಿರಿ- ವಿರಾಸತ್’
2018ರಲ್ಲಿ ಆಳ್ವಾಸ್ ನುಡಿಸಿರಿ 15 ವರ್ಷಗಳನ್ನು ಆಚರಿಸಲಿದ್ದು, ಆಳ್ವಾಸ್ ವಿರಾಸತ್ 25 ವರ್ಷಗಳನ್ನು ಆಚರಿಸಲಿದೆ. ಇದರಂಗವಾಗಿ ಆ ವರ್ಷ ವಿಶ್ವ ನುಡಿಸಿರಿ- ವಿರಾಸತಾಗಿ ಬೃಹತ್ ಮಟ್ಟದಲ್ಲಿ ಆಚರಿಸಲು ಚಿಂತನೆ ನಡೆದಿದೆ ಎಂದು ಡಾ. ಮೋಹನ್ ಆಳ್ವ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News