ಕಂಪ್ಯೂಟರ್ "ಗುರು" ಹನೀಫ್ ಪುತ್ತೂರು

Update: 2016-09-28 13:43 GMT

ಕರಾವಳಿಯ ಯುವಕರು ವಿದೇಶದಲ್ಲಿ ಹೆಸರು ಮಾಡುತ್ತಿದ್ದಾರೆಂದರೆ ಅದು ನಮ್ಮ ರಾಷ್ಟ್ರಕ್ಕೆ ಹೆಮ್ಮೆ. ಅಬುದಾಬಿಯ ಖಲೀಫಾ ಯುನಿವರ್ಸಿಟಿ ಯುಎಇಯಲ್ಲಿ ಖ್ಯಾತಿ ಪಡೆದಿರುವ ಸಂಸ್ಥೆ. ಇದನ್ನು ಯುಎಇಯ ನಂಬರ್ ವನ್ ವಿಶ್ವವಿದ್ಯಾಲಯವಾಗಲು ಸಂಸ್ಥೆ ಯೋಜನೆ ಹಾಕಿತು. ಇದಕ್ಕೆ ತನ್ನ ಶ್ರಮಹಾಕಿರುವ ದೇಶವಿದೇಶದ ಬೆರಳೆಣಿಕೆಯ ನೌಕರರಲ್ಲಿ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಲ್ಲೇರಿಯ ಕೂಲಿ ಕಾರ್ಮಿಕ ಅಬ್ಬಾಸ್ ಹಾಜಿ ಅವರ ಪುತ್ರ ಹನೀಫ್ ಪುತ್ತೂರು ಕೂಡಾ ಪ್ರಮುಖರು. ಅದಕ್ಕಾಗಿ ಖಲೀಫಾ ಯುನಿವರ್ಸಿಟಿ ಹನೀಫ್ ಅವರಿಗೆ ಪ್ರತಿಷ್ಠಿತ "ಖಲೀಫಾ ಯುನಿವರ್ಸಿಟಿ (ಕೆ.ಯು.) ಸ್ಟಾರ್ ಪ್ರಶಸ್ತಿ" ನೀಡಿ ಗೌರವಿಸಿದೆ.

ಹನೀಫ್ ಪುತ್ತೂರು ಬಡತನದಲ್ಲಿ ಬೆಳೆದವರು. ಆ ದಿನಗಳಲ್ಲಿ ತಂದೆ ಕೂಲಿ ಕಾರ್ಮಿಕರಾಗಿದ್ದರು. ಶ್ರಮಪಟ್ಟು ಕಲಿತ ಕಾರಣ ಹನೀಫ್ ಅವರು ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು  ಕಮ್ಯುನಿಕೇಶನ್ ಇಂಜಿನಿಯರಿಂಗ್ ಪದವಿ ಪಡೆದರು. ನಂತರ ಕೆಲಸಕ್ಕಾಗಿ ಬೆಂಗಳೂರು ಕಡೆ ಮುಖ ಮಾಡಿದರೂ ರೂಮ್ ಹಾಗೂ ಊಟಕ್ಕೆ ಹಣ ಇಲ್ಲದ ಹಾಗೂ ಪರಿಚಯಸ್ಥರು ಇಲ್ಲದ ಕಾರಣ ಊರಿಗೆ ಮರಳಿದರು. ಸಂಪಾಜೆಯಲ್ಲಿ ಇಲೆಕ್ಟ್ರಾನಿಕ್ಸ್ ಕಂಪೆನಿಯಲ್ಲಿ ಇನ್ವರ್ಟರ್ ರಿಪೇರಿ ಕೆಲಸಕ್ಕೆ ಸೇರಿದರು. ಮಡಿಕೇರಿಯ ಹಳ್ಳಿಗಾಡಿನ ಹಾದಿ ಬೀದಿಯಲ್ಲಿ ಸುತ್ತಾಡಲು ಕಷ್ಟವಾದುದರಿಂದ ಅದನ್ನು ಬಿಟ್ಟು ಪುತ್ತೂರಿನ ಸೈಬರ್ ಕೆಫೆ ಒಂದರಲ್ಲಿ 500 ರೂ. ಮಾಸಿಕ ಸಂಬಳಕ್ಕೆ ದುಡಿದರು. ನಂತರ ಪುತ್ತೂರಿನಲ್ಲಿ 4 ವರ್ಷ ಕಂಪ್ಯೂಟರ್ ಮತ್ತು ಸರ್ವಿಸ್ ಅಂಗಡಿ ಪ್ರಾರಂಭಿಸಿ ಕೆಲಸ ಮಾಡಿದರು. ಪುತ್ತೂರು ವಲಯದಲ್ಲಿ ಪ್ರಥಮವಾಗಿ ಒಂದು ನಿಮಿಷದ ಡಿಜಿಟಲ್ ಫೋಟೋಗ್ರಾಫಿ ಸಿಸ್ಟಮ್ ನ್ನು ಸ್ಟುಡಿಯೋಗಳಿಗೆ ಪರಿಚಯಿಸಿದವರೇ ಈ ಹನೀಫ್. ಆದ್ದರಿಂದ ಈಗಲೂ ಸ್ಟುಡಿಯೋ ಮಾಲಕರು ಹನೀಫ್ ರನ್ನು "ಫೋಟೋಶಾಪ್ ಗುರು" ಅಂತ ಪ್ರೀತಿಯಿಂದ ಕರೆಯುತ್ತಾರೆ.

ಹನೀಫ್ ಅವರಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಅದಕ್ಕಾಗಿಯೇ ವಿದೇಶ ವೃತ್ತಿಗೆ ಹಾತೊರೆಯುತ್ತಿದ್ದರು. ಅಂದಿನ ದಿನಗಳಲ್ಲಿ ಒಮಾನ್ ಗೆ ಒಬ್ಬರು ವೀಸಾ ಹಾಕುತ್ತೇನೆಂದು ಅರುವತ್ತು ಸಾವಿರ ಪಡೆದು ಮುಂಬೈಗೆ ಕರೆಸಿದ್ದರು. ಒಂದು ತಿಂಗಳು ಮುಂಬೈಯಲ್ಲೇ ಉಳಿದ ಹನೀಫ್ ರಿಗೆ ಏಜೆಂಟ್ ಪಂಗನಾಮ ಹಾಕಿದ್ದು ತಡವಾಗಿ ಅರ್ಥವಾಯಿತು. ಬಳಿಕ ಭಾವ ಹಾಕಿದ ವಿಸಿಟಿಂಗ್ ವೀಸಾದಲ್ಲಿ ದುಬೈ ಸೇರಿದ ಹನೀಫ್ ಪ್ರಾರಂಭದಲ್ಲಿ 2 ವರ್ಷ ಆಟೋಮೊಬೈಲ್ ಕಂಪೆನಿಯಲ್ಲಿ ದುಡಿದರು. ಬಳಿಕ "ಇತ್ತಿಸಲಾತ್" ಮೊಬೈಲ್ ಕಂಪೆನಿಗೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಪ್ರತಿಷ್ಟಿತ ಅಬುದಾಬಿ ಖಲೀಫಾ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರೋಗ್ರಾಮರ್ ಆನಾಲಿಸ್ಟ್ ಆಗಿ  ಕಾರ್ಯನಿರ್ವಹಿಸುತ್ತಿದ್ದಾರೆ.

ಟೈಮ್ಸ್ ಹಾಯರ್ ಎಜುಕೇಶನ್ ವೊರ್ಲ್ದ್ ಯೂನಿವರ್ಸಿಟಿ ರಾಂಕಿಂಗ್ ಪ್ರಕಾರ ಯುಎಇ ಯ ನಂ.1 ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಿರುವುದರ ಹಿಂದೆ ಹನೀಫ್ ಅವರ ಅವಿರತ ಶ್ರಮವಿದೆ. ಯುನಿವರ್ಸಿಟಿಯಲ್ಲಿ ಅತ್ಯುತ್ತಮ ಸೇವೆ ಮಾಡಿದ 8 ಮಂದಿಗೆ ಕೆ.ಯು.ಸ್ಟಾರ್ ಪ್ರಶಸ್ತಿಯನ್ನು ಖಲೀಫಾ ಯುನಿವರ್ಸಿಟಿ ವಿದ್ಯಾರ್ಥಿ ಸಭಾಂಗಣದಲ್ಲಿ ಮಂಗಳವಾರ (27/09/2016) ಸಂಜೆ ನೀಡಲಾಯಿತು. ಆ ಪ್ರಶಸ್ತಿ ಪಡೆದವರಲ್ಲಿ ಹನೀಫ್ ಕೂಡಾ ಒಬ್ಬರು. ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಗಣನೀಯ ಸೇವೆಗೈದ ಹನೀಫ್ ಪುತ್ತೂರು ಅವರಿಗೆ ಮಾನವ ಸಂಪನ್ಮೂಲದ ಮುಖ್ಯಸ್ಥ ಮುಸಲ್ಲಂ ಖತ್ರಿ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ಖಲೀಫಾ ಯುನಿವರ್ಸಿಟಿ ಅಧ್ಯಕ್ಷ ಪ್ರೊಫೆಸರ್ ಟೋಡ್ ಲಾರ್ಸೋನ್, ಉಪಾಧ್ಯಕ್ಷ ಡಾ. ಆರಿಫ್ ಅಲ್ ಅಮ್ಮಾದಿ, ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಮುಹಮ್ಮದ್ ಅಲ್ ಮುಹಲ್ಲ ಉಪಸ್ಥಿತರಿದ್ದರು.

ಗಣಕಯಂತ್ರ ವಿಭಾಗದಲ್ಲಿ ಅಳವಡಿಸಿದ ತಾಂತ್ರಿಕ ಬದಲಾವಣೆಗಳು, ಯುನಿವರ್ಸಿಟಿ ವಿದ್ಯಾರ್ಥಿಗಳ ಪ್ರವೇಶಾತಿ ವಿಭಾಗಕ್ಕೆ ಸಂಪೂರ್ಣ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ರಾಷ್ಟ್ರೀಯ ವಿದ್ಯಾರ್ಥಿಗಳ ಸಂಪೂರ್ಣ ಪ್ರವೇಶಾತಿಯನ್ನು ಶಿಕ್ಷಣ ಇಲಾಖೆಯೊಂದಿಗೆ ಜೋಡಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದು ಖಲೀಫಾ ಯುನಿವರ್ಸಿಟಿ ಮಾತ್ರವಲ್ಲದೆ ಶಿಕ್ಷಣ ಇಲಾಖೆಯಲ್ಲೂ ಉಪಯೋಗಿಸಲ್ಪಡುತ್ತಿರುವುದು ಹನೀಫ್ ಅವರನ್ನು ಈ ಪ್ರಶಸ್ತಿಗೆ ಅರ್ಹಗೊಳಿಸಿದೆ.

ಕಳೆದ ಹತ್ತು ವರ್ಷದಿಂದ ಖಲೀಫಾ ಯುನಿವರ್ಸಿಟಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಪ್ರೋಗ್ರಾಮರ್ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಹನೀಫ್, ಪುತ್ತೂರು ಸುದ್ದಿ ಸಮೂಹ ಸಂಸ್ಥೆಯ ತಾಂತ್ರಿಕ ನಿರ್ದೇಶಕರು. ವಿಶ್ವ ಕನ್ನಡಿಗ ತಂಡದ ತಾಂತ್ರಿಕ ಸಲಹೆಗಾರರು. ಮಂಗಳೂರು "ಎಂ.ಫ್ರೆಂಡ್ಸ್" ನ ಟ್ರಸ್ಟಿ. 'haneefputtur.com' ಎಂಬ ಹೆಸರಲ್ಲಿ ಗಣಕಯಂತ್ರ ತಂತ್ರಾಂಶದ ತಾಂತ್ರಿಕ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಬ್ಲಾಗ್ ಹೊಂದಿದ್ದು, ಇದು ವಿಶ್ವದೆಲ್ಲೆಡೆ ಸಹಸ್ರಾರು ಕಂಪ್ಯೂಟರ್ ತಜ್ಞರಿಗೆ ಹಲವು ಕಠಿಣ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗಿದೆ. ಹನೀಫ್ ಅವರ ಹಲವು ತಾಂತ್ರಿಕ ವೀಡಿಯೋ ತರಗತಿಗಳು ಯೂಟ್ಯೂಬ್ ನಲ್ಲಿವೆ. ಹಲವಾರು ಲಾಭರಹಿತ ಚಾರಿಟಿ ಸಂಸ್ಥೆಗಳಿಗೆ ಉಚಿತ ವೆಬ್ ರಚಿಸಿಕೊಟ್ಟ ಕೀರ್ತಿ ಇವರದ್ದು. ತನ್ನ ಜ್ಞಾನದಲ್ಲಿರುವ ತಾಂತ್ರಿಕ ವಿಷಯವನ್ನು ಇತರರಿಗೆ ಹೇಳಿಕೊಡಲು ಎಂದೂ ಹಿಂದೇಟು ಹಾಕದ ಹನೀಫ್ ಪುತ್ತೂರು ಇಂದು ಅಬುದಾಬಿ ಖಲೀಫಾ ವಿಶ್ವವಿದ್ಯಾಲಯದ ಒಂದು ಅಂಗವಾಗಿ ಬೆಳೆದಿದ್ದಾರೆ. ಇದು ಅವರ ಸೌಮ್ಯತೆ, ಸರಳತೆ ಮತ್ತು ನಿಸ್ವಾರ್ಥತೆಗೆ ಸಂದ ಗೌರವ.

-ರಶೀದ್ ವಿಟ್ಲ.

Writer - ರಶೀದ್ ವಿಟ್ಲ.

contributor

Editor - ರಶೀದ್ ವಿಟ್ಲ.

contributor

Similar News