5 ದಶಕಗಳಲ್ಲೇ ಮೊದಲ ಬಾರಿ ಕ್ಯೂಬಕ್ಕೆ ಅಮೆರಿಕ ರಾಯಭಾರಿ ನೇಮಕ

Update: 2016-09-28 12:28 GMT

ವಾಶಿಂಗ್ಟನ್, ಸೆ. 28: ಹವಾನದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕರಾಗಿರುವ ಜೆಫ್ರಿ ಡೆಲಾರೆಂಟಿಸ್‌ರನ್ನು ಕ್ಯೂಬಕ್ಕೆ ತನ್ನ ಅಧಿಕೃತ ರಾಯಭಾರಿಯನ್ನಾಗಿ ಅಮೆರಿಕ ನೇಮಿಸಿದೆ.
ಅವರು ಐದು ದಶಕಗಳಲ್ಲೇ ಕ್ಯೂಬಕ್ಕೆ ಅಮೆರಿಕದ ಮೊದಲ ರಾಯಭಾರಿಯಾಗಿದ್ದಾರೆ. ಈ ಐದು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ, ಅಂದರೆ ಫಿಡೆಲ್ ಕ್ಯಾಸ್ಟ್ರೊ ಕ್ಯೂಬದ ನಾಯಕನಾಗಿದ್ದ ಅವಧಿಯವರೆಗೂ ಈ ಎರಡು ದೇಶಗಳು ಬದ್ಧ ವೈರಿಗಳಾಗಿದ್ದವು. ಕೆಲವು ವರ್ಷಗಳ ಹಿಂದೆ ವೃದ್ಧಾಪ್ಯದಿಂದಾಗಿ ಫಿಡೆಲ್ ಕ್ಯಾಸ್ಟ್ರೊ ಅಧಿಕಾರವನ್ನು ತನ್ನ ಸಹೋದರ ರವುಲ್ ಕ್ಯಾಸ್ಟ್ರೊ ಅವರಿಗೆ ಹಸ್ತಾಂತರಿಸಿದ ಬಳಿಕ ಈ ಬೆಳವಣಿಗೆಗಳು ಸಂಭವಿಸಿವೆ.
‘‘ರಾಯಭಾರಿ ನೇಮಕಾತಿಯು ನಮ್ಮ ಎರಡು ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಸಹಜ ಮತ್ತು ಫಲಪ್ರದವಾಗಿಸುವ ನಿಟ್ಟಿನಲ್ಲಿ ಇಟ್ಟ ಇನ್ನೊಂದು ಹೆಜ್ಜೆಯಾಗಿದೆ’’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಉಭಯ ದೇಶಗಳ ನಡುವಿನ ಬಾಂಧವ್ಯದಲ್ಲಿ ಸುಧಾರಣೆಯಾಗಿದೆ ಎಂಬುದಾಗಿ ಒಬಾಮ ಮತ್ತು ಕ್ಯೂಬ ಅಧ್ಯಕ್ಷ ರವುಲ್ ಕ್ಯಾಸ್ಟ್ರೊ 2014 ಡಿಸೆಂಬರ್‌ನಲ್ಲಿ ಘೋಷಿಸಿದ್ದರು. ಎರಡೂ ರಾಷ್ಟ್ರಗಳು 2015 ಜುಲೈನಲ್ಲಿ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಿದ್ದವು.
ಅಂದಿನಿಂದ, ಒಂದು ಕಾಲದಲ್ಲಿ ಯೋಚಿಸಲೂ ಸಾಧ್ಯವಾಗದ ಬಾಂಧವ್ಯ ಸುಧಾರಣೆಯ ಕ್ರಮಗಳನ್ನು ವಾಶಿಂಗ್ಟನ್ ಮತ್ತು ಹವಾನಗಳು ತೆಗೆದುಕೊಂಡವು.
ಒಬಾಮ ಕ್ಯೂಬಕ್ಕೆ ಭೇಟಿ ನೀಡಿದರು ಹಾಗೂ 1962ರಿಂದ ಅಮೆರಿಕ ಕ್ಯೂಬದ ಮೇಲೆ ವಿಧಿಸಿದ್ದ ದಿಗ್ಬಂಧನೆಗಳ ಹಲವು ಭಾಗಗಳನ್ನು ಸಡಿಲಿಸಿದರು..
ಉಭಯ ದೇಶಗಳ ನಡುವೆ ವಿಮಾನಗಳು ಹಾರಾಡಿದವು ಹಾಗೂ ಪ್ರವಾಸಿ ಹಡಗುಗಳು ಮಯಾಮಿ ಮತ್ತು ಹವಾನಗಳ ನಡುವೆ ತೇಲತೊಡಗಿದವು.
ಕ್ಯೂಬಕ್ಕೆ ಅಮೆರಿಕದ ನೂತನ ರಾಯಭಾರಿ ಡೆಲಾರೆಂಟಿಸ್ ಈಗ ಕ್ಯೂಬಾದಲ್ಲೇ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News