ರಾಜಕೀಯ ಮಜಲುಗಳು ಸ್ಥಾನಪಲ್ಲಟಗೊಳ್ಳುತ್ತಿವೆ
ಕಳೆದ ಆರು ವಾರಗಳಿಂದ ಮಹಾರಾಷ್ಟ್ರದಲ್ಲಿ ಮರಾಠರು ಪೂರ್ಣಬಲ ದೊಂದಿಗೆ ಬೀದಿಗಿಳಿದಿದ್ದಾರೆ. ಅವರ ಬೇಡಿಕೆಯೇನೆಂದರೆ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕಾನೂನನ್ನು ತೊಡೆದು ಹಾಕಬೇಕು ಮತ್ತು ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಯಾರು ಕೂಡಾ ಅವರ ಮುಖಮೋರ್ಛಾ ಈಗಿನಷ್ಟು ಬೃಹತ್ ಆಗಿ ಬೆಳೆಯಬಹುದೆಂದು ಯೋಚಿಸಿ ರಲಿಲ್ಲ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯವು ಬಲಶಾಲಿ ಎಂದು ಪರಿಗಣಿಸಲ್ಪಟ್ಟಿದ್ದರೂ ಅವರು ರ್ಯಾಲಿಯನ್ನು ಘೋಷಿಸಿದಾಗ ಹೆಚ್ಚು ಮಂದಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮರಾಠರು ಮಹಾರಾಷ್ಟ್ರದ ಜನಸಂಖ್ಯೆಯಲ್ಲಿ ಶೇ. 33 ಭಾಗ ಹೊಂದಿದ್ದಾರೆ. 288 ಚುನಾವಣಾ ಕ್ಷೇತ್ರಗಳಲ್ಲಿ ಮರಾಠರು ಕನಿಷ್ಠ 75 ಕ್ಷೇತ್ರಗಳಲ್ಲಿ ಸೋಲು ಗೆಲುವನ್ನು ನಿರ್ಧರಿಸುತ್ತಾರೆ.
ರಾಜಕೀಯ ಧುರೀಣರಾದ ಶರದ್ ಪವಾರ್, ಅಶೋಕ್ ಚವಾಣ್ ಮತ್ತು ಪೃಥ್ವಿರಾಜ್ ಚವಾಣ್ ಮರಾಠ ಸಮುದಾಯಕ್ಕೆ ಸೇರಿದವರು ಮತ್ತು ಇವರೆಲ್ಲರೂ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವವರು.
ರಾಜಕೀಯ ಪಕ್ಷ ಹೊರತಾದ ಚಳವಳಿ
ವಿಶೇಷವೆಂದರೆ ಮರಾಠ ಚಳವಳಿಯನ್ನು ಯಾವುದೇ ರಾಜಕೀಯ ಪಕ್ಷದ ಬೆಂಬಲ ಅಥವಾ ಮಾರ್ಗದರ್ಶನವಿಲ್ಲದೆ ಆರಂಭಿಸಲಾಯಿತು ಮತ್ತು ಇನ್ನೆರಡು ತಿಂಗಳ ಕಾಲ ಅದನ್ನು ಮುಂದುವರಿಸಲು ಯೋಚಿಸಲಾಗಿದೆ. ಅನೇಕ ಪಕ್ಷಗಳು ಮತ್ತು ಮುಖಂಡರು ಈಗ ಈ ಚಳವಳಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ ಆದರೆ ಯಾರೂ ಅಷ್ಟಾಗಿ ಸಫಲರಾಗಿಲ್ಲ.
ಇನ್ನು ಪಕ್ಕದ ಗುಜರಾತ್‌ನಲ್ಲಿ 22ರ ಹರೆಯದ ಹಾರ್ದಿಕ್ ಪಟೇಲ್ ಕಳೆದ 11 ತಿಂಗಳುಗಳ ಕಾಲ ಸೆರೆಮನೆಯಲ್ಲಿದ್ದು ಈಗ ಪಾಟಿದಾರ್ ಚಳವಳಿಯನ್ನು ಮುನ್ನಡೆಸಲು ಮುಂದಾಗಿದ್ದಾರೆ. ಪಟೇಲ್ ಸಮುದಾಯ ನಡೆಸಿದ ಚಳವಳಿಗೂ ಕೂಡಾ ಯಾರೂ ರಾಜಕೀಯ ಮಾರ್ಗದರ್ಶಕರಿರಲಿಲ್ಲ. ಕಳೆದ 25 ವರ್ಷಗಳಿಂದ ಬಿಜೆಪಿಯ ಬೆನ್ನುಮೂಳೆಯಾಗಿದ್ದ ಪಾಟಿದಾರ್ ಸಮುದಾಯ ಈಗ ಅದೇ ಪಕ್ಷದ ಜೊತೆ ಜಗಳಕ್ಕೆ ನಿಂತಿದೆ. ರಾಜಕೀಯವಾಗಿ ಪಾಟಿದಾರ್ ಮತ್ತು ಮರಾಠ ಎರಡೂ ಕೂಡಾ ಬಹಳ ಪ್ರಬಲ ಮತ್ತು ಪ್ರಭಾವಿ ಸಮುದಾಯಗಳು. ಮತ್ಯಾಕೆ ಅವರು ಪ್ರತಿಭಟನೆ ನಡೆಸಲು ಬೀದಿಗಿಳಿದಿದ್ದಾರೆ?
ಗುಜರಾತ್‌ನ ಉನಾದಲ್ಲಿ ಸಾರ್ವಜನಿಕರ ಎದುರೇ ನಾಲ್ವರು ದಲಿತರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ ಪರಿಣಾಮವಾಗಿ ಮತ್ತೊಂದು ಪ್ರತಿಭಟನೆ ಆರಂಭವಾಯಿತು. ಮೊದಲಿಗೆ ದಲಿತರು ಅಹ್ಮದಾಬಾದ್‌ನಲ್ಲಿ ಪ್ರತಿಭಟನೆ ನಡೆಸಿ ನಂತರ ಉನಾದತ್ತ ಮೆರವಣಿಗೆ ನಡೆಸಿದರು.
ದಲಿತ ಸಮುದಾಯವು ರಾಜ್ಯದಲ್ಲಿ ಕೇವಲ ಶೇಕಡಾ 7 ಮಾತ್ರ ಜನಸಂಖ್ಯೆಯನ್ನು ಹೊಂದಿದೆ ಆದರೂ ಅವರ ಚಳವಳಿಯ ಧ್ವನಿ ಮಾತ್ರ ಇಡೀ ದೇಶದಲ್ಲೇ ಪ್ರತಿಧ್ವನಿಸಿತು. ಇಲ್ಲೂ ಗಮನಿಸಬೇಕಾದ ಅಂಶವೆಂದರೆ ಈ ಚಳವಳಿ ಕೂಡಾ ಯಾವುದೇ ರಾಜಕೀಯ ಪಕ್ಷದಿಂದ ನಡೆಸಿದ್ದಾಗಿರಲಿಲ್ಲ.
ಹೊಸ ನಾಯಕರು ಮತ್ತು ಬಿಜೆಪಿಯ ಕುಸಿಯುತ್ತಿರುವ ಅಧಿಕಾರ
ಪಾಟಿದಾರ್ ಮತ್ತು ದಲಿತ ಪ್ರತಿಭಟನೆಗಳ ಹೊರತಾಗಿ ಗುಜರಾತ್‌ನಲ್ಲಿ ಇನ್ನೊಂದು ಚಳವಳಿ ಆರಂಭಗೊಂಡಿದೆ. ಕ್ಷತ್ರಿಯ ಸಮುದಾಯ ರಾಜ್ಯದಲ್ಲಿ ನಿಷೇಧದ ವಿಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ನವೆಂಬರ್ ತಿಂಗಳಲ್ಲಿ 40ರ ಹರೆಯದ ಅಲ್ಪೇಶ್ ಠಾಕೂರ್ ಮುನ್ನಡೆಸುವ ಈ ಸಮುದಾಯ ರಾಜ್ಯ ವಿಧಾನಸಭೆಗೆ ತೆರಳಲಿದೆ. ಈ ಚಳವಳಿಗಳ ಪರಿಣಾಮದಿಂದಾಗಿ ಬಿಜೆಪಿ ಎಷ್ಟೊಂದು ಸಂಕಷ್ಟಕ್ಕೀಡಾಗಿದೆಯೆಂದರೆ ಗುಜರಾತ್‌ನಲ್ಲಿ ಮುಖ್ಯಮಂತ್ರಿಯನ್ನೇ ಬದಲಿಸಬೇಕಾಗಿ ಬಂತು. ಚಳವಳಿಗಳು ಅಂತರ್ಗತವಾಗಿ ರಾಜಕೀಯವಾಗಿದೆ ಆದರೂ ಪ್ರಮುಖ ರಾಜಕೀಯ ನಾಯಕರು ಮತ್ತು ಪಕ್ಷಗಳ ನಿಯಂತ್ರಣದಿಂದ ಹೊರತಾಗಿದೆ. ದೇಶದ ರಾಜಕೀಯ ಭೂಪಟದಲ್ಲಿ ಹೊಸ ನಾಯಕರ ಉಗಮವನ್ನು ನೋಡುತ್ತಿದ್ದೇವೆ. ಜಿಗ್ನೇಶ್ ಮೆವಾನಿ ಮತ್ತು ಹಾರ್ದಿಕ್ ಪಟೇಲ್‌ರಂಥಾ ಯುವಕರು ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ಇದೇ ರೀತಿ ಜೆಎನ್‌ಯುನ ಕನ್ಹಯ್ಯಾ ಕುಮಾರ್ ರಾತ್ರಿ ಹಗಲಾಗುವುದರೊಳಗೆ ಜನನಾಯಕನಾಗಿ ಹೊರಹೊಮ್ಮಿದರು ಮತ್ತು ರೋಹಿತ್ ವೇಮುಲಾ ಸಾವಿನಲ್ಲೂ ದಲಿತ ಹೋರಾಟದ ಹೊಸ ಚಿಹ್ನೆಯಾಗಿ ಗುರುತಿಸಿಕೊಂಡರು. ಎಲ್ಲಾ ಚಳವಳಿಗಳ ಮೂಲವಿರುವುದೆಲ್ಲಿ? ನಾವು ಕೇಳುವ ಆವಶ್ಯಕತೆಯಿದೆ: ಈ ಯಥೋಚಿತ ಚಳವಳಿಗಳ ಆರಂಭವು ನಾವು ನೋಡುತ್ತಾ ಬಂದಿರುವ ರಾಜಕೀಯದ ವೈಫಲ್ಯತೆಯೇ? ರಾಜಕೀಯ ಪಕ್ಷಗಳು ಈ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿವೆಯೇ? ಒಂದು ಸಮುದಾಯ ಇನ್ನೊಂದು ಸಮುದಾಯವನ್ನು ಅಪಾಯ ಎಂದು ಪರಿಗಣಿಸಲು ಆರಂಭಿಸಿದೆಯೇ? ರಾಜಕೀಯ ಪರಿಸ್ಥಿತಿ ಬದಲಾಗುತ್ತಿದೆಯೇ?
ಕೊನೆಯದಾಗಿ, ಸಾಮಾಜಿಕ ಮಾಧ್ಯಮ ಮತ್ತು ದೂರದರ್ಶನದ ತಲೆಬರಹಗಳು ರಾಜಕೀಯದ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ವಿಭಿನ್ನ ರಾಜಕೀಯ ರೂಪುರೇಷೆಯನ್ನು ಬೇಡುವ ಹೊಸ ಸಾಮಾಜಿಕ ಯೋಚನೆಯನ್ನು ಹುಟ್ಟುಹಾಕುತ್ತಿವೆಯೇ? 1991ರ ಉದಾರೀಕರಣ ಭಾರತೀಯ ಸಮಾಜವನ್ನು ಆಘಾತಕ್ಕೊಳಗಾಗಿಸಿದ್ದು ಮಾತ್ರವಲ್ಲ ಅದನ್ನು ಎಂದೆಂದಿಗೂ ಬದಲಾಯಿಸಿಬಿಟ್ಟಿತು ಎಂಬುದರಲ್ಲಿ ಎರಡು ಮಾತಿಲ್ಲ. ಹೊಸ ಆರ್ಥಿಕ ಮಹತ್ವಾಕಾಂಕ್ಷೆಗಳು ಸೃಷ್ಟಿಯಾದವು ಮತ್ತು ಹೊಸತೊಂದು ಮಧ್ಯಮವರ್ಗ ಹುಟ್ಟಿಕೊಂಡಿತು. ಭಾರತದ ಬೆಳೆಯುತ್ತಿರುವ ಆರ್ಥಿಕ ಸಮೃದ್ಧಿ ಹೊಸ ಆತ್ಮವಿಶ್ವಾಸವನ್ನು ಸಮಾಜದಲ್ಲಿ ತುಂಬಲು ಹೇತುವಾಯಿತು. ಈಗ ಈ ಆತ್ಮವಿಶ್ವಾಸ ಭಾರತೀಯ ಪ್ರಜಾಪ್ರಭುತ್ವ ಮತ್ತು ರಾಜ್ಯ ವ್ಯವಸ್ಥೆಯಲ್ಲಿ ತನ್ನ ಸ್ಥಾನವನ್ನು ಕೇಳುತ್ತಿದೆ ಮತ್ತು ನಮಗೆ ತಿಳಿದಿರುವಂತೆ ಸಮಾಜದ ಒಂದು ನಿರ್ದಿಷ್ಟ ಪರಿವರ್ತನೆಯನ್ನು ಬಯಸುತ್ತಿದೆ. ಸಮಾಜದ ಅತಿವೇಗದ ಪರಿವರ್ತನೆಯ ಜೊತೆ ಸಾಂಪ್ರದಾಯಿಕ ರಾಜಕೀಯ ಹೆಜ್ಜೆ ಹಾಕಲು ಸಾಧ್ಯವಿಲ್ಲ. 2011ರಲ್ಲಿ ಈ ವಿದ್ಯಮಾನ ಮೊದಲ ಬಾರಿಗೆ ಗೋಚರಿಸಿತು. ಅಣ್ಣಾ ಹಝಾರೆಯವರ ಭ್ರಷ್ಟಾಚಾರ ನಿಗ್ರಹ ಚಳವಳಿಯು ಸಾಂಪ್ರದಾಯಿಕ ರಾಜಕೀಯದ ಗಟ್ಟಿತಾಣಗಳನ್ನೇ ಅಲುಗಾಡಿಸಿತ್ತು. ಚಳವಳಿಯು ಮುಂದೆ ರಾಜಕೀಯ ಪಕ್ಷವಾಗಿ ಬದಲಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಐವತ್ತು ವರ್ಷ ಹಳೆಯ ಪಕ್ಷಗಳು ಕೂಡ ಹಿನ್ನಡೆ ಸಾಧಿಸಿದವು. 2014ರಲ್ಲಿ ನರೇಂದ್ರ ಮೋದಿಯವರ ರಾಜಕೀಯ ಅಲೆಯ ಹೊರತಾಗಿಯೂ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ 70 ವಿಧಾನಸಭಾ ಕ್ಷೇತ್ರಗಳಲ್ಲಿ 67 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಚಮತ್ಕಾರ ಒಂದು ಪಕ್ಷದ ಕೆಲಸವಾಗಿರಲಿಲ್ಲ ಆದರೆ ಸಾಮಾನ್ಯ ನಾಗರಿಕನಲ್ಲಿ ಹುಟ್ಟಿದ ಹೊಸ ಮಹತ್ವಾಕಾಂಕ್ಷೆಯ ಪ್ರಭಾವವಾಗಿತ್ತು. ಇದೇ ಚಮತ್ಕಾರ ಮುಂದೆ ಪಂಜಾಬ್ ಚುನಾವಣೆಯಲ್ಲೂ ಮುಂದುವರಿಯಲಿದೆ. ಪಾಟಿದಾರರು ಆಕ್ರೋಶಕ್ಕೊಳಗಾಗಿದ್ದಾದರೂ ಯಾಕೆ?
ಮರಾಠರು ಮತ್ತು ಪಾಟಿದಾರರು ತಮ್ಮ ರಾಜಕೀಯ ಪಾಲಿನಿಂದ ಅತೃಪ್ತಿಗೊಳ್ಳಲು ಮಹತ್ವಾಕಾಂಕ್ಷೆಯೇ ಕಾರಣ. ಇತರ ಸಮುದಾಯಗಳಂತಲ್ಲದೆ, ಈ ಪಂಗಡಗಳು ಹುಟ್ಟಿನಿಂದಲೇ ಪಡೆದುಕೊಂಡುಬಂದಂತಹ ಸೌಲಭ್ಯ ಮತ್ತು ಅರ್ಹತೆಯ ಕಾರಣದಿಂದ ಯಶಸ್ವಿಯಾಗುತ್ತಲೇ ಬಂದಿದ್ದಾರೆ. ಹಾಗಾಗಿ ಮರಾಠ ಮತ್ತು ಪಾಟಿದಾರ್ ಸಮುದಾಯದವರು ತಮ್ಮನ್ನು ಸಮಾಜದಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂದು ಭಾವಿಸಿದ್ದಾರೆ. ತಮ್ಮನ್ನು ವ್ಯವಸ್ಥಿತವಾಗಿ ಮತಬ್ಯಾಂಕ್‌ಗಳಾಗಿ ಮಾಡಿಕೊಳ್ಳಲಾಗಿದ್ದು ತಮ್ಮ ಒಳಿತು ಮತ್ತು ಹಿತಾಸಕ್ತಿಯ ಜೊತೆ ರಾಜಿ ಮಾಡಲಾಗಿದೆ ಎಂದು ಅವರು ಭಾವಿಸುತ್ತಾರೆ. ಪಾಟಿದಾರರ ಬಹುದೊಡ್ಡ ಜನಸಂಖ್ಯೆ ಉತ್ತಮ ಜೀವನಕ್ಕಾಗಿ ಹೊರದೇಶಗಳಿಗೆ ವಲಸೆ ಹೋಗಿವೆ. ಸಿಖ್ ಸಮುದಾಯದಂತಲ್ಲದೆ ಪಟೇಲರು ಅಮೆರಿಕ ಮತ್ತು ಇತರ ದೇಶಗಳಲ್ಲಿ ಒಂದು ಪ್ರಮುಖ ಆರ್ಥಿಕ ಗುಂಪಾಗಿ ಹೊರಹೊಮ್ಮಿದ್ದಾರೆ. ಗುಜರಾತ್‌ನಲ್ಲೂ ಪಟೇಲರ ಒಂದು ಭಾಗ ರಾಜಕೀಯದಲ್ಲಿ ಭದ್ರವಾದ ನೆಲೆಯನ್ನು ಕಂಡುಕೊಂಡಿದೆ. ಆದರೆ ಕೆನೆಪದರದ ಕೆಳಗಿರುವ ಸಮುದಾಯದ ಸದಸ್ಯರು ತಮಗೆ ಯಾವುದೇ ರೀತಿಯ ಆರ್ಥಿಕ ಸೌಲಭ್ಯಗಳು ಸಿಗುತ್ತಿಲ್ಲ ಎಂದು ತಿಳಿದಾಗ ಸ್ವಾಭಾವಿಕವಾಗಿ ಆಕ್ರೋಶ ಭುಗಿಲೇಳುತ್ತದೆ.
ಕೃಪೆ: thequint.com
ಈ ಯಥೋಚಿತ ಚಳವಳಿಗಳ ಆರಂಭವು ನಾವು ನೋಡುತ್ತಾ ಬಂದಿರುವ ರಾಜಕೀಯದ ವೈಫಲ್ಯತೆಯೇ? ರಾಜಕೀಯ ಪಕ್ಷಗಳು ಈ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿವೆಯೇ? ಒಂದು ಸಮುದಾಯ ಇನ್ನೊಂದು ಸಮುದಾಯವನ್ನು ಅಪಾಯ ಎಂದು ಪರಿಗಣಿಸಲು ಆರಂಭಿಸಿದೆಯೇ? ರಾಜಕೀಯ ಪರಿಸ್ಥಿತಿ ಬದಲಾಗುತ್ತಿದೆಯೇ?