ಆರೆಸ್ಸೆಸ್ ಜತೆ ಕಾನೂನು ಹೋರಾಟಕ್ಕಾಗಿ ಉತ್ತರ ಪ್ರದೇಶದ ಅಭಿಯಾನ ನಿಲ್ಲಿಸಿದ ರಾಹುಲ್
ಹೊಸದಿಲ್ಲಿ, ಸೆ.29: ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಮಾನನಷ್ಟ ಮೊಕದ್ದಮೆ ಹೂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸ್ಸಾಂ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.
ಅಸ್ಸಾಂನ ಬರ್‌ಪೇಟಾದ ಧಾರ್ಮಿಕ ಮಂದಿರವೊಂದಕ್ಕೆ 2015ರಲ್ಲಿ ಪ್ರವೇಶಿಸಲು ಆರೆಸ್ಸೆಸ್ ಕಾರ್ಯಕರ್ತರು ನಿರ್ಬಂಧ ಹೇರಿದ್ದಾರೆ ಎಂದು ರಾಹುಲ್ ಗಾಂಧಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.
ಆದರೆ ಅಚ್ಚರಿಯ ವಿಚಾರವೆಂದರೆ, ಕಾಂಗ್ರೆಸ್ ಸಂಸದ ಉತ್ತರಪ್ರದೇಶದಿಂದ ನಡೆಸಲು ಉದ್ದೇಶಿಸಿದ್ದ "ದಿಯೊರಿಯಾದಿಂದ ದೆಹಲಿ" ಯಾತ್ರೆಯನ್ನು ರದ್ದು ಮಾಡಿ, ಅಸ್ಸಾಂ ನ್ಯಾಯಾಲಯದಲ್ಲಿ ಹಾಜರಾಗಲು ನಿರ್ಧರಿಸಿದ್ದು. ಕಾನೂನು ತಜ್ಞರು ಹೇಳುವಂತೆ, ರಾಹುಲ್ ಗಾಂಧಿಯವರ ಪರವಾಗಿ ಅವರ ವಕೀಲರು ಹಾಜರಾಗಿದ್ದರೆ ಸಾಕಾಗಿತ್ತು.
ಆದರೆ ಆರೆಸ್ಸೆಸ್ ನಿಂದ ತಪ್ಪಿಸಿಕೊಳ್ಳಲು ರಾಹುಲ್ ಪ್ರಯತ್ನಿಸುತ್ತಿಲ್ಲ ಎನ್ನುವುದನ್ನು ಬಿಂಬಿಸಲು ಈ ತಂತ್ರ ಹೂಡಲಾಗಿದೆ ಎನ್ನುವುದು ಪಕ್ಷದ ಆಂತರಿಕ ಮೂಲಗಳ ವಿಶ್ಲೇಷಣೆ. ಇಂಥದ್ದೇ ಪ್ರಕರಣ, ಮಹಾರಾಷ್ಟ್ರದ ಭೀವಂಡಿಯಲ್ಲಿ ಕೂಡಾ ರಾಹುಲ್ ವಿರುದ್ಧ ದಾಖಲಾಗಿದೆ. ಆರೆಸ್ಸೆಸ್ ನವರು ಗಾಂಧಿ ಹಂತಕರು ಎಂದು ರಾಹುಲ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಾನನಷ್ಟ ದಾವೆ ಹೂಡಲಾಗಿತ್ತು. ಇವೆಲ್ಲದರ ನಡುವೆಯೂ ರಾಹುಲ್, ಆರೆಸ್ಸೆಸ್ ಹಾಗೂ ಹಿಂದುತ್ವ ಸಂಘಟನೆಗಳ ಮೇಲಿನ ವಾಗ್ದಾಳಿ ಮುಂದುವರಿಸಿದ್ದಾರೆ. ಸೀತಾಪುರ ರ್ಯಾಲಿ ವೇಳೆ ತಮ್ಮತ್ತ ಯುವಕನೊಬ್ಬ ಬೂಟ್ ಎಸೆದ ಘಟನೆ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡವಿದೆ ಎಂದು ಆಪಾದಿಸಿದ್ದಾರೆ.