ಕಿತ್ತಳೆ ಸಿಪ್ಪೆಯಿಂದ ಬರಕ್ಕೆ ಪರಿಹಾರ !
- ಈ ಸಂಶೋಧನೆಯ ಹಿಂದಿರುವುದು ಶಾಲಾ ಬಾಲಕಿ
- ವಿನೂತನ ಸಂಶೋಧನೆಗೆ ಭಾರೀ ಬಹುಮಾನ
ಜೊಹಾನ್ಸ್ ಬರ್ಗ್,ಸೆ.29: ಮಣ್ಣಿನಲ್ಲಿನ ನೀರಿನಂಶ ಸೋರಿ ಹೋಗದಂತೆ ತಡೆಯುವ ಉತ್ಪನ್ನವೊಂದನ್ನುಕಿತ್ತಳೆ ಹಣ್ಣಿನ ಸಿಪ್ಪೆ ಉಪಯೋಗಿಸಿ ಅಭಿವೃದ್ಧಿ ಪಡಿಸಿರುವ ದಕ್ಷಿಣ ಆಫ್ರಿಕಾದ 16 ವರ್ಷದ ಶಾಲಾ ಬಾಲಕಿ ಗೂಗಲ್‌ವಿಜ್ಞಾನ ಮೇಳದಲ್ಲಿಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಕಿಯಾರ ನಿರ್ಘಿನ್ ಎಂಬ ಹೆಸರಿನ ಈ ಬಾಲಕಿ ವಿಶ್ವದಾದ್ಯಂತ ಹಲವಾರುಮಕ್ಕಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ 50,000 ಡಾಲರ್ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಆಕೆಯ ಪ್ರಾಜೆಕ್ಟ್ ಹೆಸರು ‘ಫೈಟಿಂಗ್ ಡ್ರೌಟ್ ವಿದ್ ಫ್ರುಟ್’ (ಬರವನ್ನು ಹಣ್ಣಿನಿಂದ ಹೋರಾಡುವುದು). ಇತ್ತೀಚೆಗೆ ದಕ್ಷಿಣ ಆಫ್ರಿಕಾ ದೇಶವನ್ನು ಕಾಡಿದ ತೀವ್ರ ಬರಗಾಲವೇ ಅವಳ ಈ ಯೋಜನೆಗೆ ಪ್ರೇರಣೆಯಾಗಿತ್ತು.
ಜೊಹಾನ್ಸ್ ಬರ್ಗ್ ಇಲ್ಲಿನ ಸೈಂಟ್ ಮಾರ್ಟಿನ್ಸ್ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ನಿರ್ಘಿನ್ ತನ್ನ ಈ ಹೊಸ ಉತ್ಪನ್ನವನ್ನು ತಯಾರಿಸಲು 45 ದಿನಗಳ ಅವಧಿಯಲ್ಲಿ ಮೂರು ಪ್ರಯೋಗಗಳನ್ನು ನಡೆಸಬೇಕಾಗಿಬಂದಿತ್ತು. ಅವಳು ತಯಾರಿಸಿರುವ ಈ ಉತ್ಪನ್ನದುಬಾರಿ ಪಾಲಿಮರ್ ಉತ್ಪನ್ನಗಳಿಗೆ ಉತ್ತಮ ಪರ್ಯಾಯವೆಂದು ಹೇಳಲಾಗುತ್ತಿದೆ. ಹಣ್ಣಿನ ರಸ ತಯಾರಿಕಾ ಘಟಕಗಳು ಉತ್ಪತ್ತಿಸುವ ತ್ಯಾಜ್ಯದಿಂದ ಇದನ್ನು ತಯಾರಿಸಲಾಗಿದೆ. ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿರುವ ಅಣುಗಳು ಹಾಗೂ ಅವೊಕೆಡೋ ಸಿಪ್ಪೆಯಲ್ಲಿನ ಎಣ್ಣೆಯನ್ನು ಈ ಉತ್ಪನ್ನ ತಯಾರಿಗಾಗಿ ಉಪಯೋಗಿಸಲಾಗಿದೆ.
ಈ ಉತ್ಪನ್ನ ಸಂಪೂರ್ಣವಾಗಿ ಬಯೋ ಡಿಗ್ರೇಡೇಬಲ್ ಆಗಿದ್ದು ಮಿತವ್ಯಯಕಾರಿಯೂ ಆಗಿದೆ. ಈ ಉತ್ಪನ್ನ ತಯಾರಿಸಲು ಬಳಸಲಾದ ಇತರವಸ್ತುಗಳೆಂದರೆವಿದ್ಯುತ್ ಹಾಗೂ ಸಮಯ.
ನಿರ್ಘಿನ್ ಭಾಗವಹಿಸಿದ್ದ ಗೂಗಲ್ ವಿಜ್ಞಾನ ಮೇಳದಲ್ಲಿ 13 ರಿಂದ 18ವಯೋಮಿತಿಯ ನೂರಾರು ಮಕ್ಕಳು ಭಾಗವಹಿಸಿದ್ದರು.ಆಕೆ ಪ್ರಶಸ್ತಿಯನ್ನು ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಸ್ವೀಕರಿಸಿದ್ದಳು.ಈ ಸಂದರ್ಭದಲ್ಲಿ ಮಾತನಾಡಿದ ಆಕೆ ತಾನು ತಯಾರಿಸಿರುವ ಉತ್ಪನ್ನ ರೈತರಿಗೆ ಅವರ ಹಣ ಹಾಗೂ ಬೆಳೆಗಳನ್ನು ಉಳಿತಾಯ ಮಾಡಲು ಸಹಕಾರಿಯಾಗುವುದೆಂದು ಆಶಿಸಿದ್ದಳು.