ಭಾರತ ಕಾರ್ಯಾಚರಣೆಗೆ ಬಳಸಿದ 'ಸೀಮಿತ' ತಂತ್ರವೇನು ?
ಹೊಸದಿಲ್ಲಿ, ಸೆ.29: ಎದುರಾಳಿಯನ್ನು ಚಕಿತಗೊಳಿಸುವ , ನಿರ್ದಿಷ್ಟ ಗುರಿಯ ಮೇಲೆರಗಿ ಗರಿಷ್ಟ ಪ್ರಮಾಣದ ಹಾನಿ ಎಸಗುವ , ಸುತ್ತಮುತ್ತಲಿನ ಪ್ರದೇಶಗಳಿಗೆ ಶೂನ್ಯ ಅಥವಾ ಅತ್ಯಲ್ಪ ಪ್ರಮಾಣದ ಹಾನಿ ಉಂಡು ಮಾಡುವ ಲೆಕ್ಕಾಚಾರದ ಮಿಲಿಟರಿ ಕಾರ್ಯಾಚರಣೆ- ಇದು ಸೀಮಿತ ದಾಳಿಗೆ ಮಿಲಿಟರಿ ತಜ್ಞರು ನೀಡುವ ವಿವರಣೆ.
ಭಾರತೀಯ ಸೇನೆ ನಡೆಸಿದ ದಾಳಿಯನ್ನು ಸೂಕ್ತವಾಗಿ ನಿರ್ವಹಿಸಲಾಗಿದೆ. ಶಭಾಷ್ ಎಂದು ಸೇನೆಯ ಬೆನ್ನುತಟ್ಟಿದ್ದಾರೆ ವಾಯುಪಡೆಯ ಮಾಜಿ ಮುಖ್ಯಸ್ಥ ಫಾಲಿ ಹೋಮಿ . ಸೀಮಿತ ದಾಳಿ ಎಂಬುದು ಒಂದು ಜಟಿಲ ಕಾರ್ಯಾಚರಣೆಯಾಗಿದ್ದು ಇದನ್ನು ನಿರ್ವಹಿಸಲು ಸಾಕಷ್ಟು ಎದೆಗಾರಿಕೆ ಬೇಕು ಎನ್ನುತ್ತಾರೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಶಂಕರ್‌ಪ್ರಸಾದ್ . ಚಲಿಸುವ ಗುರಿಯ ಮೇಲೆ ದಾಳಿ ನಡೆಸುವುದು ಕಠಿಣ ಕೆಲಸ. ದಾಳಿ ಮಾಡಿ, ಗುರಿ ಸಾಧಿಸಿದ ಬಳಿಕ ನಮ್ಮ ಯಾವುದೇ ಯೋಧರಿಗೆ ಹಾನಿಯಾಗದ ರೀತಿ ವಾಪಾಸು ಬರುವ ಈ ಕಾರ್ಯಾಚರಣೆಯಲ್ಲಿ ಪ್ರತಿಯೊಬ್ಬ ಯೋಧರಿಗೂ ಯೋಜನೆಯ ಬಗ್ಗೆ ವಿವರಿಸಲಾಗುತ್ತದೆ. ತಂಡದ ಪ್ರತಿಯೊಬ್ಬರಿಗೂ ನಿರ್ದಿಷ್ಟ ಹೊಣೆಗಾರಿಕೆ ನೀಡಲಾಗುತ್ತದೆ.
ಗುರುವಾರ ಮುಂಜಾನೆ 4.30ರ ವೇಳೆ ವೇಳೆ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಒಳನುಗ್ಗಿದ ಭಾರತೀಯ ಸೇನೆ ಅಲ್ಲಿದ್ದ ಉಗ್ರರ 7 ಶಿಬಿರಗಳ ಮೇಲೆ ಸೀಮಿತ ದಾಳಿ ನಡೆಸಿತ್ತು. ಪ್ರತೀ ಶಿಬಿರಗಳಲ್ಲಿ 30ರಿಂದ 40ರಷ್ಟು ಉಗ್ರರಿದ್ದು ಈ ದಾಳಿಯಲ್ಲಿ ಉಗ್ರರು, ಅವರ ಮಾರ್ಗದರ್ಶಕರು ಮತ್ತು ಅವರನ್ನು ಮುನ್ನಡೆಸುವವರು ಸೇರಿದಂತೆ ಭಾರೀ ಪ್ರಾಣಹಾನಿ ಸಂಭವಿಸಿದೆ . ಈ ದಾಳಿ ಉಗ್ರರನ್ನು ಅಚ್ಚರಿಯಲ್ಲಿ ಕೆಡವಿತು. ನಮ್ಮ ಪಡೆಗಳು ಗಡಿರೇಖೆಯಿಂದ ಒಳನುಸುಳಿ, ಸೂರ್ಯ ಉದಯಿಸುವ ಮೊದಲು ವಾಪಾಸು ಬಂದವು ಎಂದು ಸರಕಾರದ ಮೂಲಗಳು ತಿಳಿಸಿವೆ.