ಸಿಬಿಐಗೆ ದಿಲ್ಲಿ ಮಹಿಳಾ ಆಯೋಗದ ನೋಟಿಸ್
ಹೊಸದಿಲ್ಲಿ, ಸೆ.29: ಸಿಬಿಐಯ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕಳಂಕಿತ ಉನ್ನತ ಸರಕಾರಿ ಅಧಿಕಾರಿಯೊಬ್ಬರು ತನ್ನ ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೈಗೊಂಡಿರುವ ಕ್ರಮದ ವಿವರ ಒದಗಿಸುವಂತೆ ದಿಲ್ಲಿಯ ಮಹಿಳಾ ಆಯೋಗವಿಂದು ತನಿಖೆ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಈ ವಿಷಯದಲ್ಲಿ ‘ಪಕ್ಷಪಾತ ರಹಿತ’ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ಸಿಬಿಐ ನಿರ್ದೇಶಕ ಅನಿಲ್‌ಕುಮಾರ್ ಸಿನ್ಹಾರಿಗೆ ತಾವು ನೋಟಿಸ್ ನೀಡಿದ್ದೇವೆಂದು ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ತಿಳಿಸಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳ ಮಾಜಿ ಮಹಾ ನಿರ್ದೇಶಕ ಬಿ.ಕೆ. ಬನ್ಸಲ್ ಹಾಗೂ ಅವರ ಮಗ ಯೋಗೇಶ್ ಸೆ.27ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬನ್ಸಲ್‌ರ ಪತ್ನಿ ಸತ್ಯಬಾಲಾ ಹಾಗೂ ಪುತ್ರಿ ನೇಹಾ 2ತಿಂಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬನ್ಸಲ್ ಬರೆದಿದ್ದರೆನ್ನಲಾದ ಆತ್ಮಹತ್ಯೆ ಪತ್ರದಲ್ಲಿ ಸಿಬಿಐಯ ಒಬ್ಬ ಡಿಐಜಿ, ಇಬ್ಬರು ಅಧಿಕಾರಿಣಿಯರು ಹಾಗೂ ಒಬ್ಬ ‘ದಪ್ಪಗಿನ’ ಹವಾಲ್ದಾರ್ ತನ್ನ ಪತ್ನಿ ಹಾಗೂ ಪುತ್ರಿಗೆ ಚಿತ್ರಹಿಂಸೆ ನೀಡಿದ್ದರು. ಆ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡರೆಂದು ಬರೆಯಲಾಗಿತ್ತು.
ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿರುವ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿದೆಯೇ ಎಂದು ಮಹಿಳಾ ಆಯೋಗ ಸಿಬಿಐಗೆ ಕಳುಹಿಸಿರುವ ನೋಟಿಸ್‌ನಲ್ಲಿ ಪ್ರಶ್ನಿಸಿದೆ.