8 ಭಾರತೀಯ ಯೋಧರ ಹತ್ಯೆ; ಓರ್ವನ ಸೆರೆ
ಮುರಫ್ಫರ್‌ಬಾದ್, ಸೆ.29: ಟಟ್ಟಾ ಪಾನಿ ಎಂಬಲ್ಲಿನ ನಿಯಂತ್ರಣ ರೇಖೆಯ ಬಳಿ ಭಾರತೀಯ ಪಡೆಗಳು ಗುರುವಾರ ನಡೆಸಿದ ಗುಂಡಿನ ದಾಳಿಗೆ ಉತ್ತರವಾಗಿ ದೇಶದ ಸೇನೆ ನಡೆಸಿದ ಪ್ರತಿದಾಳಿಯಲ್ಲಿ 8 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದು ಒಬ್ಬ ಯೋಧನನ್ನು ಸೆರೆ ಹಿಡಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಪಾಕಿಸ್ತಾನದ ‘ಡಾನ್’ ಪತ್ರಿಕೆಯನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ಇದನ್ನು ವರದಿ ಮಾಡಿದೆ. ಘಟನೆಯಲ್ಲಿ ಇಬ್ಬರು ಪಾಕ್ ಸೈನಿಕರು ಮರಣ ಹೊಂದಿದ್ದಾರೆ . ಸೆರೆಸಿಕ್ಕ ಯೋಧ ಮಹಾರಾಷ್ಟ್ರ ಮೂಲದ ಚಂದು ಬಾಬೂಲಾಲ್ ಚೌಹಾಣ್‌ನನ್ನು ಅಜ್ಞಾತ ಸ್ಥಳವೊಂದಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪಾಕ್ ಮೂಲಗಳು ತಿಳಿಸಿವೆ. ಜಿಯೋ ನ್ಯೂಸ್‌ನ ‘ಕ್ಯಾಪಿಟಲ್ ಟಾಕ್’ ಕಾರ್ಯಕ್ರಮದಲ್ಲಿ ಪತ್ರಕರ್ತ ಹಮೀದ್ ಮೀರ್, ಎರಡು ಕಡೆ ನಡೆದ ಗುಂಡಿನ ಕಾಳಗದಲ್ಲಿ 14 ಮಂದಿ ಭಾರತೀಯ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದಾಗ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಮೇಜರ್ ಜನರಲ್ ಇಜಾಝ್ ಅಹ್ಮದ್ ಈ ಮಾತನ್ನು ಪುಷ್ಟೀಕರಿಸಿದರು.
ಕದನದ ಕಣದಲ್ಲಿ ಬಿದ್ದಿರುವ ಯೋಧರ ಮೃತದೇಹಗಳನ್ನು ಪಡೆಯಲು ಭಾರತೀಯ ಸೇನಾ ಪಡೆಗೆ ಇನ್ನೂ ಸಾಧ್ಯವಾಗಿಲ್ಲ ಎಂದು ಪಾಕ್ ಸೇನಾ ಮೂಲಗಳು ತಿಳಿಸಿವೆ. ಆಝಾದ್ ಕಾಶ್ಮೀರಕ್ಕೆ ಸೇರಿದ ಭಿಂಬೇರ್, ಹಾಟ್‌ಸ್ಪ್ರಿಂಗ್, ಕೇಲ್ ಮತ್ತು ಲಿಪಾ ವಲಯಗಳಲ್ಲಿ ಗುರುವಾರ ಮುಂಜಾನೆ 2.30ರಿಂದ 8 ಗಂಟೆಯವರೆಗೆ ಉಭಯ ದೇಶಗಳ ಯೋಧರ ಮಧ್ಯೆ ಗುಂಡಿನ ದಾಳಿ ನಡೆದಿದ್ದು ಭಾರತೀಯ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗಿದೆ. ಈ ಘಟನೆಯ ಬಳಿಕ ಭಾರತದ ವಿದೇಶ ವ್ಯವಹಾರ ಇಲಾಖೆಯ ಸಚಿವರು, ರಕ್ಷಣಾ ಸಚಿವರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ, ನಿಯಂತ್ರಣ ರೇಖೆಯ ಒಳನುಗ್ಗಿ ಭಾರತೀಯ ಪಡೆಗಳು ನಡೆಸಿದ ಸರ್ಜಿಕಲ್ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದರು. ಇದೊಂದು ಅಸಂಬದ್ಧ ಹೇಳಿಕೆ ಎಂದು ತಳ್ಳಿಹಾಕಿರುವ ಪಾಕಿಸ್ತಾನ, ಗಮನ ಬೇರೆಡೆ ಸೆಳೆಯಲು ಭಾರತೀಯರು ಹೆಣೆದ ಕಟ್ಟುಕಥೆ ಎಂದಿದೆ. ಪಾಕಿಸ್ತಾನದ ವಾಯುಕ್ಷೇತ್ರ ಸುರಕ್ಷಿತವಾಗಿದ್ದು ಯಾವುದೇ ವಿದೇಶಿ ಆಕ್ರಮಣವನ್ನು ಎದುರಿಸಲು ಪಾಕಿಸ್ತಾನ ವಾಯುಪಡೆ ಸನ್ನದ್ಧವಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.