ಮೃತನ ಪಿಂಚಣಿ ತಾಯಿಗೆ? ಅಥವಾ ಪತ್ನಿಗೆ?: ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು
ಹೊಸದಿಲ್ಲಿ, ಸೆ.30: ಮೃತ ವ್ಯಕ್ತಿಯ ಪಿಂಚಣಿ ಹಣಕ್ಕಾಗಿ ಅತ್ತೆ- ಸೊಸೆ ನಡುವೆ ನಡೆಯುತ್ತಿದ್ದ ಸುಧೀರ್ಘ ಕಾನೂನು ಸಮರಕ್ಕೆ ಸುಪ್ರೀಂಕೋರ್ಟ್ ಮಂಗಳ ಹಾಡಿದೆ. ಉದ್ಯೋಗಿಯೊಬ್ಬ ಮೃತಪಟ್ಟರೆ ಆತನ ಪಿಂಚಣಿಯಲ್ಲಿ ಪತ್ನಿಗೆ ಮಾತ್ರ ಹಕ್ಕಿದೆಯೇ ವಿನಃ ತಾಯಿಗೂ ಯಾವ ಹಕ್ಕೂ ಇರುವುದಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಎ.ಆರ್.ದವೆ ಹಾಗೂ ಎಲ್,ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠ, ಹರ್ಯಾಣ ಸರ್ಕಾರದ ಉದ್ಯೋಗದಲ್ಲಿದ್ದ ಯಶ್ ಪಾಲ್ ಎಂಬವರು ಮೃತಪಟ್ಟ ಬಳಿಕ ಅವರ ಪತ್ನಿ ಹಾಗೂ ತಾಯಿ ನಡುವಿನ ವ್ಯಾಜ್ಯವನ್ನು ಬಗೆಹರಿಸಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯ ಅನ್ವಯ ಮೃತ ವ್ಯಕ್ತಿಯ ತಾಯಿ ಹಾಗೂ ಗಂಡನ ಪಿಂಚಣಿ ಹಕ್ಕನ್ನು ಮೃತ ವ್ಯಕ್ತಿಯ ಪತ್ನಿ ಪ್ರತಿಪಾದಿಸಿದ್ದರಿಂದ ಈ ವ್ಯಾಜ್ಯ ಸುಪ್ರೀಂಕೋರ್ಟ್ ಮೆಟ್ಟಲೇರಿತ್ತು.
ಹಿಂದೂ ಉತ್ತರದಾಯಿತ್ವ ಕಾಯ್ದೆಯ ಅನ್ವಯ, ಒಬ್ಬ ವ್ಯಕ್ತಿ ಉಯಿಲು ಪತ್ರ ಬರೆಯದೇ ಮೃತಪಟ್ಟಲ್ಲಿ, ಆತನ ಆಸ್ತಿಯ ಮೊದಲ ಪಾಲು ತಕ್ಷಣದ ಸಂಬಂಧಿಕರಿಗೆ ಹೋಗುತ್ತದೆ ಎದು ನ್ಯಾಯಮೂರ್ತಿ ದವೆ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಯಶ್ ಪಾಲ್ ಪ್ರಕರಣದಲ್ಲಿ ಆಸ್ತಿಯನ್ನು ತಾಯಿ ಹಾಗೂ ಪತ್ನಿ ನಡುವೆ ಪಾಲು ಮಾಡಬಹುದು ಎಂದು ತೀರ್ಪು ನೀಡಿದ್ದಾರೆ. ಆದರೆ ಪಿಂಚಣಿ ಹಣ ಇದಕ್ಕಿಂತ ಭಿನ್ನ. ಇದರಲ್ಲಿ ಪತ್ನಿಗೆ ಬಿಟ್ಟರೆ ಯಾರಿಗೂ ಯಾವ ಹಕ್ಕೂ ಇರುವುದಿಲ್ಲ ಎಂದು ಹಿಂದಿನ ತೀರ್ಪನ್ನು ಉಲ್ಲೇಖಿಸಿ ತೀರ್ಪು ನೀಡಿದ್ದಾರೆ.