ಮೂರನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿಗೆ ಈತ ಕೊಟ್ಟ ಉಡುಗೊರೆ ಏನು ನೋಡಿ

Update: 2016-09-30 04:02 GMT

ಆಗ್ರಾ, ಸೆ .30: ಬೇಟಿ ಬಚಾವೊ ಬೇಟಿ ಪಢಾವೋ ಯೋಜನೆಯ ಮೂಲಕ ಹೆಣ್ಣುಮಕ್ಕಳ ಸಬಲೀಕರಣ ಹಾಗೂ ಜೀವನ ಭದ್ರತೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಇದನ್ನು ಅಣಕಿಸುವ ರೀತಿಯಲ್ಲಿ ಮೂರನೇ ಹೆಣ್ಣುಮಗು ಹೆತ್ತ ಪತ್ನಿಯನ್ನು ಗಂಡ ಹಾಗೂ ಆತನ ಸಂಬಂಧಿಕರು ಹೊಡೆದು ಸಾಯಿಸಿದ ಅಮಾನವೀಯ ಘಟನೆ ವರದಿಯಾಗಿದೆ.
ಗಂಡ ಹಾಗೂ ಸಂಬಂಧಿಕರಿಂದ ಹಲ್ಲೆಗೊಳಗಾಗಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಆರೋಪಿಗಳು ಪರಾರಿಯಾಗಿದ್ದಾರೆ. ಆಗ್ರಾ ವಲಯದಲ್ಲಿ ಇದು ಕಳೆದ ಮೂರು ತಿಂಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಮೃತ ಮಹಿಳೆಯನ್ನು ಮೂರು ಹೆಣ್ಣುಮಕ್ಕಳ ತಾಯಿ ಪ್ರೀತಿ (26) ಎಂದು ಗುರುತಿಸಲಾಗಿದೆ. ಆರೋಪಿ ಗಂಡ ಹರೀಶ್ ಚಂದ್ರ ಹಾಗೂ ಬಾವಂದಿರು ಲಾಠಿಯಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದರು. ಗಾಯಾಳು ಮಹಿಳೆ ಸೋಮವಾರ ರಾತ್ರಿ ಎತಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೊತ್ವಾಲಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಮಹಿಳೆಯ ತಂದೆ ರಾಜ್ ಬಹದ್ದೂರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 323, 323 ಹಾಗೂ 304ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಪ್ರೀತಿ ಕಳೆದ ವಾರ ಮೂರನೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಗಂಡ ರವಿವಾರ ರಾತ್ರಿ ಪಾನಮತ್ತನಾಗಿ ಬಂದು ಮರದ ಬಡಿಗೆಯಿಂದ ಆಕೆ ಪ್ರಜ್ಞೆ ತಪ್ಪುವವರೆಗೂ ಹೊಡೆದ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಆಕೆಯನ್ನು ಮಾತ್ರ ಬಿಟ್ಟು ಬಂದರು. ಆಸ್ಪತ್ರೆಯಲ್ಲಿ ಮಹಿಳೆ ಸೋಮವಾರ ರಾತ್ರಿ ಮೃತಪಟ್ಟಿದ್ದು, ಆರೋಪಿಗಳಿಗಾಗಿ ಶೋಧ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News