ಶರದ್ ಯಾದವ್ ಮನೆಗೆ ರಾಜನಾಥ್ ಭೇಟಿ ಹಿಂದೆ ಏನಿದೆ ಗೊತ್ತೇ ?

Update: 2016-09-30 10:47 GMT

ಹೊಸದಿಲ್ಲಿ, ಸೆ. 30  : ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು ಬುಧವಾರ ರಾಜ್ಯಸಭಾ ಸದಸ್ಯ ಹಾಗು ಜೆಡಿಯು ಹಿರಿಯ ನಾಯಕ ಶರದ್ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಭೇಟಿಯ ಬಗ್ಗೆ ಈಗ ರಾಜಕೀಯ ವಲಯದಲ್ಲಿ ನಾನಾ ವಿಶ್ಲೇಷಣೆ, ವದಂತಿಗಳು ಹರಿದಾಡುತ್ತಿವೆ. 

ಜನಸಂಘ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಶತಮಾನೋತ್ಸವವನ್ನು ಕೇಂದ್ರ ಸರಕಾರ ಆಚರಿಸುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಜೆಡಿಯು ನಾಯಕ ಶರದ್ ಯಾದವ್ ಹಾಗು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಇದ್ದಾರೆ. ಇದಕ್ಕೆ ಸಂಬಂಧಿಸಿ ರಾಜ್ ನಾಥ್ ಅವರು ಯಾದವ್ ಮನೆಗೆ ಭೇಟಿ ನೀಡಿದ್ದರು. ಆದರೆ ಈ ಭೇಟಿ ಅಷ್ಟಕ್ಕೇ ಸೀಮಿತವಾಗಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. 

" ಬಿಜೆಪಿ ಮತ್ತೆ ಜೆಡಿಯುಗೆ ಹತ್ತಿರವಾಗಲೆಂದೇ ಈ ಸಮಿತಿಯಲ್ಲಿ ಯಾದವ್ ಹಾಗು ನಿತೀಶ್ ಅವರನ್ನು ಸೇರಿಸಿದೆ. ಈಗ ಬಿಹಾರದಲ್ಲಿ ಜೆಡಿಯು ಹಾಗು ಆರ್ ಜೆ ಡಿ ಸರಕಾರವಿದ್ದರೂ ಮುಂದಿನ ದಿನಗಳಲ್ಲಿ ಈ ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಬಂದಾಗ ಮತ್ತೆ ಒಂದಾಗಲು ಬಿಜೆಪಿ ಈಗಿನಿಂದಲೇ ತಯಾರಿ ನಡೆಸುತ್ತಿದೆ " ಎಂಬುದು ಒಂದು ವದಂತಿ. 

ಈ ನಡುವೆ ಬಿಹಾರದ ಜೆಡಿಯು ಹಿರಿಯ ನಾಯಕರೊಬ್ಬರು " ರಾಜಕೀಯದಲ್ಲಿ ಶಾಶ್ವತ ಮಿತ್ರರು ಅಥವಾ ಶತ್ರುಗಳು ಇರುವುದಿಲ್ಲ. ರಾಜಕೀಯ ಸಂಭಾವ್ಯತೆಗಳ ಆಟ " ಎಂದು ಹೇಳುವ ಮೂಲಕ ಈ ಚರ್ಚೆಗೆ ಇನ್ನಷ್ಟು ಇಂಬು ನೀಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News