ಸಾರ್ಕ್ ಶೃಂಗಸಭೆ ಮುಂದೂಡಿದ ಪಾಕ್

Update: 2016-09-30 17:07 GMT

ಇಸ್ಲಾಮಾಬಾದ್, ಸೆ.30: ಭಾರತ ಸೇರಿದಂತೆ ಐದು ರಾಷ್ಟ್ರಗಳು ಗೈರುಹಾಜರಾಗಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ನವೆಂಬರ್‌ನಲ್ಲಿ ನಡೆಯಲಿದ್ದ ಸಾರ್ಕ್ ಶೃಂಗಸಭೆಯನ್ನು ಮುಂದೂಡಿದೆ.
ಈ ಬಗ್ಗೆ ಪಾಕ್ ವಿದೇಶಾಂಗ ಕಾರ್ಯಾಲಯವು ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ಸಾರ್ಕ್ ಶೃಂಗಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ತಿಳಿಸಿದೆ.
 ಉರಿಯಲ್ಲಿ ಭಾರತೀಯ ಸೇನಾಶಿಬಿರದ ಮೇಲೆ ಪಾಕ್ ಉಗ್ರರ ದಾಳಿಯನ್ನು ಪ್ರತಿಭಟಿಸಿ, ಭಾರತವು ಶೃಂಗಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿ ಅಫ್ಘಾನಿಸ್ತಾನ, ಬಾಂಗ್ಲಾ, ಭೂತಾನ್ ದೇಶಗಳು ಕೂಡಾ ಶೃಂಗಸಭೆಗೆ ಗೈರುಹಾಜರಾಗುವುದಾಗಿ ಘೋಷಿಸಿದ್ದವು.
 2016ರ ನವೆಂಬರ್ 9-10ರ ನಡುವೆ ಇಸ್ಲಾಮಾಬಾದ್‌ನಲ್ಲಿ ನಡೆಯಲಿದ್ದ 19ನೇ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರುವ ಭಾರತದ ನಿರ್ಧಾರವನ್ನು ಪಾಕಿಸ್ತಾನವು ಖಂಡಿಸುತ್ತದೆಯೆಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
  ಬಹುಪಕ್ಷೀಯ ಪ್ರಾದೇಶಿಕ ಸಹಕಾರ ಸಭೆಯಲ್ಲಿ ಎರಡು ರಾಷ್ಟ್ರಗಳ ನಡುವಿನ ಬಿಕ್ಕಟ್ಟನ್ನು ಎಳೆದು ತರುವ ಮೂಲಕ ಭಾರತವು ಸಾರ್ಕ್ ಸನದಿನ ನಿಯಮಗಳನ್ನು ಭಾರತವು ಉಲ್ಲಂಘಿಸಿದೆಯೆಂದು ಅದು ಆಪಾದಿಸಿದೆ.
 ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಸಾರ್ಕ್ ನಾಯಕರನ್ನು ಸ್ವಾಗತಕ್ಕೆ ಎದುರು ನೋಡುತ್ತಿದ್ದರು. ಈ ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗಿತ್ತೆಂದು ಹೇಳಿಕೆಯು ತಿಳಿಸಿದೆ.
‘ಶೃಂಗಸಭೆಯ ಹಳಿತಪ್ಪಿಸುವ’ ಭಾರತದ ನಿರ್ಧಾರವು, ಈ ಪ್ರದೇಶದಲ್ಲಿ ಬಡತನದ ವಿರುದ್ಧ ಹೋರಾಡಬೇಕೆಂಬ ಪ್ರಧಾನಿ ನರೇಂದ್ರ ಮೋದಿತಾನಾಗಿಯೇ ನೀಡಿದ ಕರೆಗೆ ವ್ಯತಿರಿಕ್ತವಾಗಿ ದೆಯೆಂದು ಅದು ಆಪಾದಿಸಿದೆ.
ಉರಿ ಘಟನೆಗೆ ಸಂಬಂಧಿಸಿ, ಶೃಂಗಸಭೆಗೆ ಗೈರುಹಾಜರಾಗುವ ಭಾರತದ ನಿರ್ಧಾರವು ಕಾಶ್ಮೀರದಲ್ಲಿ ಭಾರತವು ನಡೆಸುತ್ತಿರುವ ದೌರ್ಜನ್ಯಗಳಿಂದ ಜಗತ್ತಿನ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆಯೆಂದು ಪಾಕ್ ವಿದೇಶಾಂಗ ಕಾರ್ಯಾಲಯ ಆಪಾದಿಸಿದೆ.
ದಕ್ಷಿಣ ಏಶ್ಯದ ರಾಷ್ಟ್ರಗಳ ಒಕ್ಕೂಟವಾದ ಸಾರ್ಕ್‌ನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನ, ನೇಪಾಳ, ಮಾಲ್ದೀವ್ಸ್, ಭೂತಾನ್ ಸದಸ್ಯ ರಾಷ್ಟ್ರಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News