×
Ad

ಯುದ್ಧಕ್ಕೆ ಹಾತೊರೆಯುವವರು ಒಮ್ಮೆ ಉರಿ ಹುತಾತ್ಮ ಯೋಧನ ತಂದೆಯ ಮಾತು ಕೇಳಿಕೊಳ್ಳಿ

Update: 2016-10-01 08:39 IST

ಕೊಲ್ಕತ್ತಾ, ಅ.1:  ಭಾರತ- ಪಾಕ್ ಗಡಿ ನಿಯಂತ್ರಣ ರೇಖೆ ಮೀರಿ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಯುದ್ಧದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಈ ದಾಳಿ ಉಭಯ ದೇಶಗಳ ನಡುವಿನ ಯುದ್ಧವಾಗಿ ಉಲ್ಬಣಗೊಳ್ಳದಿರಲಿ ಎಂದು 12 ದಿನಗಳ ಹಿಂದಷ್ಟೇ ಉರಿ ದಾಳಿಯಲ್ಲಿ ಮಗನನ್ನು ಕಳೆದುಕೊಂಡ ಓಂಕಾರನಾಥ್ ದೌಲಿ (64) ಪ್ರಾರ್ಥಿಸುತ್ತಿದ್ದಾರೆ.

ದೌಲಿ ಅವರ ಪುತ್ರ ಗಂಗಾಧರ್, ಸೆಪ್ಟೆಂಬರ್ 18ರ ಉರಿ ದಾಳಿಯಲ್ಲಿ ಉಗ್ರರ ದಾಳಿಗೆ ಬಲಿಯಾಗಿದ್ದರು. ಭಾರತೀಯ ಸೇನೆಯ ಪ್ರತಿದಾಳಿ ಮೃತ ಯೋಧರ ಆತ್ಮಕ್ಕೆ ಶಾಂತಿ ತರುವಂಥದ್ದು. ಇನ್ನಾದರೂ ಉತ್ತಮ ಸ್ಥಿತಿ ನಿರ್ಮಾಣವಾಗಲಿ ಎನ್ನುವುದು ಹೌರಾ ಜಿಲ್ಲೆಯ ದಿನಗೂಲಿ ನೌಕರರಾದ ಅವರ ಸ್ಪಷ್ಟ ಅಭಿಮತ.

"ನನ್ನ ಮಗನ ಆತ್ಮಕ್ಕೆ ಖಂಡಿತವಾಗಿಯೂ ಶಾಂತಿ ಸಿಗುತ್ತದೆ ಎನ್ನುವುದು ಖಚಿತ. ಆದರೆ ಯುದ್ಧ ನಮಗೆ ಬೇಕಾಗಿಲ್ಲ. ಏಕೆಂದರೆ ಇದರಿಂದ ನನ್ನ ಮಗನಂಥ ಉಭಯ ದೇಶಗಳ ಅಸಂಖ್ಯಾತ ಯೋಧರು ಸಾವು ನೋವು ಅನುಭವಿಸಬೇಕಾಗುತ್ತದೆ" ಎಂದು ವಿವರಿಸಿದರು.

"ಈ ಸಮಸ್ಯೆಗೆ ಉಭಯ ದೇಶಗಳು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಬಂದೂಕುಗಳು ಎರಡೂ ದೇಶಗಳ ಪರಿಸ್ಥಿತಿ ಹದಗೆಡಲು ಕಾರಣವಾಗುತ್ತದೆ. ನನಗೆ ಮಗನ ಸಾವಿಗಿಂತ ಕ್ರೂರವಾದದ್ದು ಯಾವುದೂ ಇಲ್ಲ" ಎಂದು ಹೇಳುತ್ತಾರೆ. ಎರಡು ವರ್ಷದ ಅವರ ಉದ್ಯೋಗದಿಂದಷ್ಟೇ ಇಡೀ ಕುಟುಂಬ ಬಡತನವನ್ನು ಮೆಟ್ಟಿನಿಲ್ಲಲು ಸಾಧ್ಯವಾಗಿತ್ತು.

ಮಗನ ಸಾವಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಕ್ಷಣದ ಪರಿಹಾರವಾಗಿ ನೀಡಲು ಮುಂದಾಗಿದ್ದ ಒಂದು ಲಕ್ಷ ರೂಪಾಯಿಯನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದರು. ಶೇಂದಿ ಕುಡಿದು ಸಾಯುವ ವ್ಯಕ್ತಿಯ ಕುಟುಂಬಕ್ಕೆ ನೀಡುವಷ್ಟೇ ಪರಿಹಾರವನ್ನು ಒಬ್ಬ ಯೋಧನ ಕುಟುಂಬಕ್ಕೂ ನೀಡುವುದು ಯೋಧನಿಗೆ ತೋರುವ ಅಗೌರವ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News