ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಈಗ ಕಳವಳಕಾರಿ ಸ್ಥಿತಿಯಲ್ಲಿ

Update: 2016-10-01 03:55 GMT

ಹೊಸದಿಲ್ಲಿ, ಅ.1: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ತೀವ್ರವಾಗಿದೆ. ಐದು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿರುವುದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.

ದೇಶದಲ್ಲಿ 15 ವರ್ಷ ಮೇಲ್ಪಟ್ಟ ಶ್ರಮಶಕ್ತಿಯಲ್ಲಿ ಶೇಕಡ 5ಕ್ಕಿಂತಲೂ ಅಧಿಕ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಶೇಕಡ 33ರಷ್ಟು ಉದ್ಯೋಗಿಗಳ ಉದ್ಯೋಗ ಒಂದು ವರ್ಷಕ್ಕೆ ಸೀಮಿತವಾಗಿದ್ದರೆ, ಶೇಕಡ 68ರಷ್ಟು ಕುಟುಂಬಗಳು ಮಾಸಿಕ 10 ಸಾವಿರ ರೂಪಾಯಿ ಆದಾಯವನ್ನಷ್ಟೇ ಗಳಿಸುತ್ತಿವೆ ಎಂದು ಕಾರ್ಮಿಕ ಬ್ಯೂರೊ ನಡೆಸಿದ ಉದ್ಯೋಗ- ನಿರುದ್ಯೋಗ ಸಮೀಕ್ಷಾ ವರದಿ ಹೇಳಿದೆ.

ಒಟ್ಟು 1.6 ಲಕ್ಷ ಕುಟುಂಬಗಳ 7.8 ಲಕ್ಷ ಮಂದಿಯನ್ನು 2015ರ ಎಪ್ರಿಲ್‌ನಿಂದ ಡಿಸೆಂಬರ್ ನಡುವೆ ಸಮೀಕ್ಷೆಗೆ ಗುರಿಪಡಿಸಲಾಗಿತ್ತು. ನಗರದ ಉದ್ಯೋಗಿಗಳು ಸಹಜವಾಗಿಯೇ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಶೇಕಡ 82ರಷ್ಟು ನಗರ ಉದ್ಯೋಗಾಕಾಂಕ್ಷಿಗಳು ವರ್ಷವಿಡೀ ಉದ್ಯೋಗ ಪಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಕೇವಲ ಶೇಕಡ 53ರಷ್ಟು.

ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 42 ಮಂದಿ ಮಾತ್ರ ವರ್ಷವಿಡೀ ಉದ್ಯೋಗ ಪಡೆಯುತ್ತಾರೆ. ಆದ್ದರಿಂದ ಗ್ರಾಮೀಣ ಕುಟುಂಬಗಳ ಪೈಕಿ ಶೇಕಡ 77ರಷ್ಟು ಕುಟುಂಬಗಳ ಮಾಸಿಕ ಆದಾಯ 10 ಸಾವಿರಕ್ಕಿಂತ ಕಡಿಮೆ ಇದೆ. ಆದರೆ ನಗರ ಪ್ರದೇಶಗಳಲ್ಲಿ ಶೇಕಡ 50ರಷ್ಟು ಕುಟುಂಬಗಳು 10 ಸಾವಿರದಿಂದ 50 ಸಾವಿರ ವರೆಗೆ ಮಾಸಿಕ ಆದಾಯ ಪಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News