ಬೆಳೆದು ನಿಂತ ಪೈರು ಬಿಟ್ಟು ಗ್ರಾಮದಿಂದ ಓಡಿದರು !

Update: 2016-10-01 06:10 GMT

ಅಮೃತಸರ್ , ಅ. 1 : ಪಾಕಿಸ್ತಾನ ಗಡಿಯಲ್ಲಿರುವ ಪಂಜಾಬ್ ನ ಗ್ರಾಮಗಳಿಂದ ಬೃಹತ್ ಪ್ರಮಾಣದಲ್ಲಿ ಜನರ ಸ್ಥಳಾಂತರ ನಡೆಯುತ್ತಿದೆ. ಅಮೃತಸರ್ , ತರ್ನ್ ತರಣ್ , ಫೀರೋಜ್ಪುರ್ , ಗುರುದಾಸ್ ಪುರ, ಪಠಾಣ್ ಕೋಟ್ ಹಾಗು ಫಜಿಲ್ಕಾ ಜಿಲ್ಲೆಗಳ ೫ ಲಕ್ಷಕ್ಕೂ ಹೆಚ್ಚು ಮಂದಿಯನ್ನು ತಮ್ಮ ಊರು ಬಿಡುವಂತೆ ಹೇಳಲಾಗಿದೆ. ಈ ಪೈಕಿ ಹೆಚ್ಚಿನವರು ಬೆಳೆದು ನಿಂತ ಬೆಳೆಯನ್ನು ಬಿಟ್ಟು ಹೋಗಬೇಕಾದ ರೈತರು. 

ಇಡೀ ಪ್ರದೇಶದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಪಂಜಾಬ್ ನಲ್ಲಿ ಪಾಕಿಸ್ತಾನ ಜೊತೆ 553 ಕಿಮೀ ಉದ್ದದ ಗಡಿ ಇದೆ. ಇದಕ್ಕೆ ವಿದ್ಯುತ್ ತಂತಿಯ ಬೇಲಿ ಇದೆ. ಗಡಿಗೆ ಸಮೀಪದ ಗ್ರಾಮಗಳ ಜನರನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಊರು ಬಿಡುವಂತೆ ಸೇನೆ ಹೇಳಿದೆ. ಅಲ್ಲಿ ನೆಲದಲ್ಲಿ ಸ್ಪೋಟಕಗಳನ್ನು ಇಡಲು ಸೇನೆ ಸಿದ್ಧವಾಗಿದೆ. ಗುರುವಾರವೇ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಎಲ್ಲಿಗೆ ಹೋಗಬೇಕೆಂದು ತೋಚದ ಜನ ಸಮೀಪದ ಗುರುದ್ವಾರ ಹಾಗು ಆಶ್ರಮಗಳ ಮೊರೆ ಹೋಗಿದ್ದಾರೆ. 

" ಸರಕಾರ ಇದಕ್ಕಾಗಿ ಯಾವುದೇ ಸಿದ್ಧತೆ ಮಾಡಿಲ್ಲ. ನಾವು ಯಾವುದಾದರೂ ಸಮುದಾಯ ಕೇಂದ್ರ ಆಥವಾ ಗುರುದ್ವಾರ ನೋಡಬೇಕಷ್ಟೆ " ಎಂದು ಗ್ರಾಮಸ್ಥರು ದೂರಿದ್ದಾರೆ. " ಇನ್ನು ಕೆಲವೇ ದಿನಗಳಲ್ಲಿ ಕಟಾವ್ ಮಾಡಬೇಕು. ಈಗ ನಮಗೆ ಬೆಳೆದು ನಿಂತ ಪೈರಿನದ್ದೇ ಚಿಂತೆ " ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. 

 ಪ್ರತಿ ಜಿಲ್ಲೆಗೆ ತುರ್ತು ಕೆಲಸಗಳಿಗಾಗಿ ಒಂದು ಕೋಟಿ ರೂಪಾಯಿ ನೀಡುವಂತೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಹೆಚ್ಚು ಸಮಯ ತಮ್ಮ ಊರಿನಿಂದ ದೂರ ಇರಬೇಕಾಗಿ ಬಂದರೆ ರೈತರಿಗೆ ಬೆಳೆ ಪರಿಹಾರ ನೀಡುವುದಾಗಿ ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News