ಸ್ವಚ್ಛ ಭಾರತ ಅಭಿಯಾನಕ್ಕೆ 2 ವರ್ಷ
ಹೊಸದಿಲ್ಲಿ, ಅ.1: ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ಸ್ವಚ್ಛ ಭಾರತ್ ಅಭಿಯಾನಕ್ಕೆ ಅ.2ರಂದು ಎರಡು ವರ್ಷ ತುಂಬಲಿದ್ದು ಅಂದು ಎರಡನೆ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಆದರೆ ಈಚೆಗೆ ರಾಷ್ಟ್ರಮಟ್ಟದ ಸಮೀಕ್ಷೆಯೊಂದರಲ್ಲಿ ಪಾಲ್ಗೊಂಡ ಪ್ರತೀ ಐವರಲ್ಲಿ ಒಬ್ಬರು ಮಾತ್ರ ಈ ಎರಡು ವರ್ಷಗಳಲ್ಲಿ ಪೌರಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ಸುಧಾರಣೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆ ಪ್ರಕಾರ ಕೇವಲ ನಾಲ್ಕು ರಾಜ್ಯಗಳಲ್ಲಿ ಮಾತ್ರ ಸ್ವಚ್ಛತಾ ಕಾರ್ಯದಲ್ಲಿ ಸುಧಾರಣೆಯಾಗಿರುವುದು ಸ್ಪಷ್ಟವಾಗಿದೆ. ಇದರಲ್ಲಿ ಮೂರು ಬಿಜೆಪಿ ಆಡಳಿತದ ರಾಜ್ಯಗಳು. ಸರಕಾರದ ಶೌಚಾಲಯ ನಿರ್ಮಾಣ ಅಭಿಯಾನ, ಪ್ರಮುಖ ರಾಜಕಾರಣಿಗಳು, ಸಿನೆಮಾ ತಾರೆಯರ ಮೂಲಕ ವ್ಯಾಪಕ ಪ್ರಚಾರ ನೀಡಿದರೂ ದೇಶದ ಇತರ ರಾಜ್ಯಗಳಲ್ಲಿ ಹೆಚ್ಚಿನ ಬದಲಾವಣೆೆಯಾಗಿಲ್ಲ . ಸಿಟಿಝನ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರಂ ನಡೆಸಿದ ಸಮೀಕ್ಷೆ ಪ್ರಕಾರ ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚು ಸುಧಾರಣೆಯಾಗಿದೆ. ದಿಲ್ಲಿ, ಉತ್ತರಪ್ರದೇಶ, ಪಂಜಾಬ್ ಮತ್ತು ಬಿಹಾರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಉಳಿದ ರಾಜ್ಯಗಳಲ್ಲಿ ಅಲ್ಪಪ್ರಮಾಣದ ಸುಧಾರಣೆಯಾಗಿದೆ. ಆದರೆ ಪೌರಸಂಸ್ಥೆಗಳು ಜನರೊಡನೆ ಅಥವಾ ಅಭಿಯಾನದ ಜೊತೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡದಿರುವುದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ ಎಂದು ಸಿಟಿಝನ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರಂನ ಮುಖ್ಯ ಯೋಜನಾಧಿಕಾರಿ ಕೆ.ಯತೀಶ್ ರಜಾವತ್ ತಿಳಿಸಿದ್ದಾರೆ . ಕಳೆದ ಎರಡು ವರ್ಷಗಳಲ್ಲಿ ಜನರಲ್ಲಿ ನಾಗರಿಕ ಪ್ರಜ್ಞೆ ಜಾಗೃತಗೊಂಡಿಲ್ಲ ಎಂದು ಸರ್ವೆಯಲ್ಲಿ ಪಾಲ್ಗೊಂಡವರಲ್ಲಿ ಅರ್ಧಾಂಶಕ್ಕೂ ಹೆಚ್ಚಿನ ಮಂದಿ ಅಭಿಪ್ರಾಯಪಟ್ಟರೆ, ಶೇ.71ರಷ್ಟು ಮಂದಿ ಪೌರಸಂಸ್ಥೆಗಳ ಸಿಬ್ಬಂದಿಯ ದೂರವಾಣಿ ಸಂಖ್ಯೆ ತಮ್ಮಲ್ಲಿಲ್ಲ ಎಂದು ತಿಳಿಸಿದ್ದಾರೆ. ನಗರದಲ್ಲೆಡೆ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ರಾಶಿ ಹಾಕಿರುವುದನ್ನು ತಾವು ಗಮನಿಸಿದ್ದೇವೆ ಎಂದು ಶೇ.87ರಷ್ಟು ಮಂದಿ ತಿಳಿಸಿದ್ದಾರೆ. 2014ರಲ್ಲಿ ಅಭಿಯಾನಕ್ಕೆ ಚಾಲನೆ ದೊರೆತ ಬಳಿಕ ಸಾರ್ವಜನಿಕ ಶೌಚಾಲಯಗಳ ಲಭ್ಯತೆ ಹೆಚ್ಚಾಗಿದೆ ಎಂದು ಪ್ರತೀ ಐವರಲ್ಲಿ ಓರ್ವ ಮಾತ್ರ ಅಭಿಪ್ರಾಯಪಟ್ಟಿದ್ದಾನೆ. ಇಂಡಿಯಾ ಸ್ಪೆಂಡ್ ವೆಬ್‌ಸೈಟ್ ನಡೆಸಿದ ಅಧ್ಯಯನದ ಪ್ರಕಾರ, ಅತೀ ಕೆಳಮಟ್ಟದ ನಿರ್ವಹಣೆ ತೋರಿದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒರಿಸ್ಸಾ ಮತ್ತು ಝಾರ್ಖಂಡ್ ರಾಜ್ಯಗಳು ನೈರ್ಮಲ್ಯದ ವಿಷಯದಲ್ಲಿ ಕನಿಷ್ಠ ಪ್ರಯತ್ನ ತೋರಿದ ಇತಿಹಾಸ ಹೊಂದಿದೆ. ಈ ಐದು ರಾಜ್ಯಗಳಲ್ಲಿ ಕೇವಲ ಶೇ.23ರಷ್ಟು ಮನೆಗಳು ಮಾತ್ರ ಶೌಚಾಲಯ ವ್ಯವಸ್ಥೆಯನ್ನು ಹೊಂದಿದ್ದು ಕಳೆದ 15 ವರ್ಷಗಳಲ್ಲಿ ಇದು ಶೇ.2ರಷ್ಟು ಹೆಚ್ಚಳವಾಗಿದೆ. 17 ವರ್ಷಗಳ ಹಿಂದೆ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಹಮ್ಮಿಕೊಂಡಿದ್ದ ಸಂಪೂರ್ಣ ನೈರ್ಮ್ಯಲೀಕರಣ ಅಭಿಯಾನದ ಸಂದರ್ಭದಲ್ಲೂ ಈ ಐದು ರಾಜ್ಯಗಳ ಸಾಧನೆ ಇದೇ ಆಗಿತ್ತು. ದೇಶದ 1.2 ಬಿಲಿಯನ್ ಜನಸಂಖ್ಯೆಯ ಶೇ.37ರಷ್ಟು ಜನ ಈ ಐದು ರಾಜ್ಯಗಳಲ್ಲಿದ್ದಾರೆ. ಈ ಐದು ರಾಜ್ಯಗಳಲ್ಲಿರುವ ಒಟ್ಟು ಜನಸಂಖ್ಯೆ 448 ಮಿಲಿಯನ್. ಈ ರಾಜ್ಯಗಳಲ್ಲಿ ವಿಫಲವಾದರೆ ಸ್ವಚ್ಛತಾ ಅಭಿಯಾನ ಯಶಸ್ವಿಯಾಗುವುದು ಬಹುತೇಕ ಅಸಂಭವ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ . ದೇಶದ ಸ್ವಾತಂತ್ರ ಹೋರಾಟದ ವೇಳೆ ಮಹಾತ್ಮಾ ಗಾಂಧೀಜಿ ಚಾಲನೆ ನೀಡಿದ್ದ ಸ್ವಚ್ಛಾಗ್ರಹ ಎಂಬ ಅಭಿಯಾನದ ಕಡೆಗೆ ಪ್ರಧಾನಿ ಮೋದಿ ಈ ವಾರ ಗಮನ ಸೆಳೆದಿದ್ದಾರೆ. ಆದರೆ ಪ್ರಧಾನಿಯವರ ಕ್ಷೇತ್ರ ವಾರಣಾಶಿಯಲ್ಲಿ ಶೌಚಾಲಯ ನಿರ್ಮಿಸುವ ತನ್ನ ಗುರಿಯನ್ನು ಸಾಧಿಸಲು ಸರಕಾರಕ್ಕೆ ಕನಿಷ್ಠ 32 ವರ್ಷ ಬೇಕಾಗಬಹುದು ಎಂದು ಸಿಟಿಝನ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರಂ ಸಮೀಕ್ಷೆಯಲ್ಲಿ ತಿಳಿಸಿದೆ. ರಾಜನಾಥ್ ಸಿಂಗ್ ಅವರ ಕ್ಷೇತ್ರ ಲಕ್ನೋದಲ್ಲಿ 35 ವರ್ಷ, ವಿದೇಶಾಂಗ ವ್ಯವಹಾರ ಸಚಿವೆ ಸುಶ್ಮಾ ಸ್ವರಾಜ್ ಅವರ ಕ್ಷೇತ್ರ ವಿದಿಷಾದಲ್ಲಿ 8 ವರ್ಷ, ಕೃಷಿ ಸಚಿವ ರಾಧಾಮೋಹನ ಸಿಂಗ್ ಅವರ ಕ್ಷೇತ್ರದಲ್ಲಿ 74 ವರ್ಷ, ಸಾರಿಗೆ ಸಚಿವ ನಿತಿನ ಗಡ್ಕರಿ ಅವರ ಕ್ಷೇತ್ರದಲ್ಲಿ ಗುರಿ ಸಾಧಿಸಲು 2 ವರ್ಷ ಬೇಕಾಗುತ್ತದೆ ಎಂದು ಸಮೀಕ್ಷೆ ಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.