65,250 ಕೋ.ರೂ.ಕಪ್ಪುಹಣ ಘೋಷಣೆ: ಜೇಟ್ಲಿ
ಹೊಸದಿಲ್ಲಿ,ಅ.1: ಇತ್ತೀಚಿನ ಆದಾಯ ತೆರಿಗೆ ಬಹಿರಂಗ ಯೋಜನೆಯಡಿ 64,275 ಜನರು 65,250 ಕೋ.ರೂ.ಕಪ್ಪುಹಣವನ್ನು ಘೋಷಿಸಿದ್ದು, ಪರಿಶೀಲನೆಯು ಪೂರ್ಣಗೊಂಡ ಬಳಿಕ ಈ ಮೊತ್ತದಲ್ಲಿ ಸ್ವಲ್ಪ ಏರಿಕೆಯಾಗಬಹುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಇಲ್ಲಿ ಪ್ರಕಟಿಸಿದರು.
ಈ ಯೋಜನೆಯಡಿ ಘೋಷಿತ ಕಪ್ಪುಹಣಕ್ಕೆ ತೆರಿಗೆ ಮತ್ತು ದಂಡದ ಮೊತ್ತವನ್ನು ಶೇ.45ಕ್ಕೆ ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ 30,000 ಕೋ.ರೂ.ಗೂ ಅಧಿಕ ಆದಾಯ ದೊರೆಯಲಿದೆ.
ಕಪ್ಪುಹಣ ಘೋಷಣೆಗೆ ಸರಕಾರವು ಪ್ರಕಟಿಸಿದ್ದ ಒಂದು ಬಾರಿಯ ನಾಲ್ಕು ತಿಂಗಳ ವಿಶೇಷ ಅವಕಾಶ ಜೂ.1ರಿಂದ ಆರಂಭಗೊಂಡು ಸೆ.30ರ ಮಧ್ಯರಾತ್ರಿಯವರೆಗೂ ಲಭ್ಯವಿತ್ತು.
ಇಂದಿಲ್ಲಿ ಸುದ್ದಿಗಾರರಿಗೆ ಈ ಬಗ್ಗೆ ವಿವರಗಳನ್ನು ನೀಡಿದ ಜೇಟ್ಲಿ, ಈ ಘೋಷಣೆಗಳ ಮೂಲಕ ಸಂಗ್ರಹವಾಗುವ ಹಣವು ಭಾರತದ ಸಂಚಿತ ನಿಧಿಗೆ ಜಮೆಯಾಗಲಿದೆ ಮತ್ತು ಸಾಮಾಜಿಕ ಭದ್ರತೆ ಉದ್ದೇಶಗಳಿಗೆ ಬಳಕೆಯಾಗಲಿದೆ ಎಂದು ತಿಳಿಸಿದರು.
ಈಗಿನ ಲೆಕ್ಕಾಚಾರದಂತೆ ಘೋಷಣೆಯಾಗಿರುವ ಕಪ್ಪುಹಣದ ಪ್ರಮಾಣ ಪ್ರತಿ ಘೋಷಣೆದಾರನಿಗೆ ಸರಾಸರಿ ಒಂದು ಕೋ.ರೂ.ನಷ್ಟಾಗಿದೆ ಎಂದ ಅವರು, ಈ ಯೋಜನೆಯ ಲಾಭ ಪಡೆದುಕೊಂಡು ಬಚ್ಚಿಟ್ಟಿದ್ದ ಆದಾಯವನ್ನು ಘೋಷಿಸಿರುವವರ ಹೆಸರುಗಳನ್ನು ಬಹಿರಂಗಗೊಳಿಸುವ ಸಾಧ್ಯತೆಗಳನ್ನು ತಳ್ಳಿ ಹಾಕಿದರು.