×
Ad

‘ಸಾಮ್ನಾ’ ವ್ಯಂಗ್ಯಚಿತ್ರಕ್ಕಾಗಿ ಉದ್ಧವ್‌ರಿಂದ ಕ್ಷಮೆಯಾಚನೆ

Update: 2016-10-01 23:09 IST

ಮುಂಬೈ,ಅ.1: ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟಗೊಂಡಿದ್ದ, ಮರಾಠಾ ಸಮುದಾಯದ ರ್ಯಾಲಿಗಳನ್ನು ಗೇಲಿ ಮಾಡಿದ್ದ ವ್ಯಂಗ್ಯಚಿತ್ರಕ್ಕಾಗಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಶನಿವಾರ ಕ್ಷಮೆಯನ್ನು ಯಾಚಿಸಿದ್ದಾರೆ. ವಿವಾದವನ್ನು ಹುಟ್ಟು ಹಾಕಿದ್ದ ಈ ವ್ಯಂಗ್ಯಚಿತ್ರದಿಂದಾಗಿ ಪಕ್ಷವು ಮರಾಠಾ ಸಮುದಾಯ ಮತ್ತು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತಲ್ಲದೆ, ಇಲ್ಲಿಯ ಪಕ್ಷದ ಕಚೇರಿಯ ಮೇಲೆ ದಾಳಿಯೂ ನಡೆದಿತ್ತು.

 ಕಳೆದ ರವಿವಾರದ ‘ಸಾಮ್ನಾ’ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದ ವ್ಯಂಗ್ಯಚಿತ್ರವು ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ ಮೀಸಲಾತಿಯಂತಹ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮರಾಠಾ ಸಮುದಾಯವು ರಾಜ್ಯಾದ್ಯಂತ ನಡೆಸಿದ್ದ ವೌನ ಮೆರವಣಿಗೆಗಳನ್ನು ಪ್ರಸ್ತಾಪಿಸಿತ್ತು.
ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದ ವಿವಾದ ಅಂತ್ಯ ಕಂಡಿರಬಹುದು. ಆದರೆ ನನ್ನ ಹೃದಯದಲ್ಲಿನ ಕ್ಷೋಭೆಯಿನ್ನೂ ಹಾಗೆಯೇ ಇದೆ. ನಾವು ಮಹಿಳೆಯರನ್ನು ಗೌರವಿಸುತ್ತೇವೆ,ಶಿವ ಸೈನಿಕನೋರ್ವ ಎಂದೂ ಮಹಿಳೆಯರನ್ನು ಅವಹೇಳನ ಮಾಡುವುದಿಲ್ಲ. ಹೀಗಾಗಿ ಈ ಘಟನೆ ನನಗೆ ತೀವ್ರ ನೋವನ್ನುಂಟು ಮಾಡಿದೆ. ಈ ವಿವಾದದಿಂದಾಗಿ ಶಿವಸೇನೆಯಲ್ಲಿನ ತಮ್ಮ ನಂಬಿಕೆಯನ್ನು ಕಳೆದುಕೊಳ್ಳದ ಜನತೆಗೆ ನಾನು ಆಭಾರಿಯಾಗಿದ್ದೇನೆ ಎಂದು ಠಾಕ್ರೆ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿವಸೇನೆಯ ಅಧ್ಯಕ್ಷನಾಗಿ ಮತ್ತು ‘ಸಾಮ್ನಾ’ದ ಸಂಪಾದಕನಾಗಿ ಈ ವ್ಯಂಗ್ಯಚಿತ್ರದಿಂದ ನೊಂದುಕೊಂಡಿರ ಬಹುದಾದ ಎಲ್ಲ ತಾಯಂದಿರು ಮತ್ತು ಸಹೋದರಿಯರ ಕ್ಷಮೆ ಕೋರುತ್ತೇನೆ. ಆದರೆ ಈ ವ್ಯಂಗ್ಯಚಿತ್ರವು ಯಾರನ್ನೂ ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News