ಸ್ಮತಿ ಇರಾನಿಗೆ ಸಮನ್ಸ್ ಬಗ್ಗೆ ಅ.6ರಂದು ಆದೇಶ
Update: 2016-10-01 23:10 IST
ಹೊಸದಿಲ್ಲಿ, ಅ.1: ನಕಲಿ ಪದವಿ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಸ್ಮತಿ ಇರಾನಿ ಅವರಿಗೆ ಸಮನ್ಸ್ ನೀಡುವ ಬಗ್ಗೆ ದಿಲ್ಲಿ ಕೋರ್ಟ್ ಅ.6ರಂದು ತೀರ್ಪು ಪ್ರಕಟಿಸಲಿದೆ. ಈ ಕುರಿತ ಆದೇಶವನ್ನು ಮೆಟ್ರೊಪಾಲಿಟನ್ ನ್ಯಾಯಾಧೀಶ ಹವೀಂದರ್ ಸಿಂಗ್ ಇಂದು ಪ್ರಕಟಿಸಬೇಕಿತ್ತು. ಆದರೆ ಆದೇಶಪತ್ರ ಸಿದ್ಧವಾಗಿಲ್ಲದ ಕಾರಣ ಅ.6ರಂದು ತೀರ್ಪು ನೀಡುವುದಾಗಿ ಅವರು ತಿಳಿಸಿದ್ದಾರೆ. ಹವ್ಯಾಸಿ ಪತ್ರಕರ್ತ ಫಿರ್ಯಾದುದಾರ ಅಹ್ಮರ್ ಖಾನ್ ಅವರ ವಾದವನ್ನು ಆಲಿಸಿದ ನ್ಯಾಯಾಧೀಶರು, ಚುನಾವಣಾ ಆಯೋಗ ಮತ್ತು ದಿಲ್ಲಿ ವಿವಿ ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿದ ಬಳಿಕ , ಸ್ಮತಿ ಇರಾನಿಗೆ ಸಮನ್ಸ್ ನೀಡುವ ಬಗ್ಗೆ ಅ.6ರಂದು ತೀರ್ಪು ನೀಡುವುದಾಗಿ ಪ್ರಕಟಿಸಿದರು.