×
Ad

ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್‌ - ಬಳ್ಳಾರಿ ಟಸ್ಕರ್ಸ್‌ಫೈನಲ್‌ಗೆ

Update: 2016-10-01 23:42 IST

ಹುಬ್ಬಳ್ಳಿ, ಅ.1: ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಇಂದಿಲ್ಲಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್‌ನ ಸೆಮಿಫೈನಲ್‌ನಲ್ಲಿ ಮಣಿಸಿದ ಆತಿಥೇಯ ಹುಬ್ಬಳ್ಳಿ ಟೈಗರ್ಸ್‌ ತಂಡ ಫೈನಲ್‌ಗೆ ಪ್ರವೇಶಿಸಿದೆ.
ಹುಬ್ಬಳ್ಳಿಯ ಕೆಎಸ್‌ಸಿಎ ರಾಜ್‌ನಗರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 154 ರನ್‌ಗಳ ಸವಾಲನ್ನು ಪಡೆದ ಹುಬ್ಬಳ್ಳಿ ಟೈಗರ್ಸ್‌ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿಕೊಂಡಿತು.
ಹುಬ್ಬಳ್ಳಿ ತಂಡದ ಪರ ಆಲ್‌ರೌಂಡ್ ಪ್ರದರ್ಶನ ನೀಡಿದ ಸಿಜೆ ವಿಲಿಯಮ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟಾಸ್ ಜಯಿಸಿದ ಹುಬ್ಬಳ್ಳಿ ಟೈಗರ್ಸ್‌ ತಂಡ ಫೀಲ್ಡಿಂಗ್‌ನ್ನು ಆಯ್ದುಕೊಂಡಿತ್ತು. ಗೆಲುವಿಗೆ ಸವಾಲು ಕಠಿಣವಾಗಿದ್ದರೂ, ಹುಬ್ಬಳ್ಳಿ ತಂಡದ ಆಟಗಾರರ ಸಂಘಟಿತ ಪ್ರಯತ್ನದ ಮೂಲಕ ತಂಡ ಗೆಲುವಿನ ದಡ ಸೇರಿತು.
ಆರಂಭಿಕ ದಾಂಡಿಗಾರದ ಮುಹಮ್ಮದ್ ತಾಹ ಮತ್ತು ಮಂಜೇಶ್ ರೆಡ್ಡಿ ಅವರಿಗೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ವಿಫಲರಾದರು. 2.2ನೆ ಓವರ್‌ನಲ್ಲಿ ಆರಂಭಿಕ ದಾಂಡಿಗ ತಾಹ (14) ಅವರು ಆರ್.ವಿನಯ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದ್ದರು. ನಾಯಕ ಕೆ.ಆರ್.ಕಪೂರ್(9) ಬೇಗನೆ ಔಟಾದರು. ಮಂಜೇಶ್ ರೆಡ್ಡಿ 14 ರನ್ ಗಳಿಸಿದರು.
ಡಿ.ನೇಗಿ 28 ಎಸೆತಗಳನ್ನು ಎದುರಿಸಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 30 ರನ್ ಸೇರಿಸಿದರು. ಕ್ರಾಂತಿ ಕುಮಾರ್ (14) ಎರಡಂಕೆಯ ಸ್ಕೋರ್ ದಾಖಲಿಸಿದರು. ಹೂವೆರ್ ಖಾತೆ ತೆರೆಯಲಿಲ್ಲ. 15.5 ಓವರ್‌ಗಳಲ್ಲಿ 101 ರನ್ ಗಳಿಸಿದ್ದಾಗ ಹುಬ್ಬಳ್ಳಿ ತಂಡ 6 ವಿಕೆಟ್ ಕಳೆದುಕೊಂಡಿತು.
 ಏಳನೆ ವಿಕೆಟ್‌ಗೆ ವಿಕೆಟ್ ಕೀಪರ್ ಕೆ.ಎನ್ ಭರತ್ ಮತ್ತು ಸಿ.ಜೆ. ವಿಲಿಯಮ್ ಮುರಿಯದ ಜೊತೆಯಾಟದಲ್ಲಿ 55 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ವಿಲಿಯಮ್ 13 ಎಸೆತಗಳನ್ನು ಎದುರಿಸಿ 1 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ ಔಟಾಗದೆ 39 ರನ್ ಗಳಿಸಿದರು. ಭರತ್ ಔಟಾಗದೆ 27 ರನ್(21ಎ,1ಬೌ,2ಸಿ) ಗಳಿಸಿದರು.
ಬೆಳಗಾವಿ ತಂಡದ ಸಾಕುಜ 25ಕ್ಕೆ 2, ವಿನಯ್ ಕುಮಾರ್ ಮತ್ತು ಭಾರದ್ವಾಜ್ ತಲಾ ಒಂದು ವಿಕೆಟ್ ಪಡೆದರು.
ಬೆಳಗಾವಿ 153/8: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಳಗಾವಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 153 ರನ್ ಗಳಿಸಿತ್ತು.
 ತಂಡದ ಅಗ್ರ ಸರದಿಯ ದಾಂಡಿಗರು ಚೆನ್ನಾಗಿ ಆಡಿದ್ದರು. ಮೊದಲ ವಿಕೆಟ್‌ಗೆ 42 ರನ್‌ಗಳ ಕೊಡುಗೆ ನೀಡಿದ್ದರು. ಮಾಯಾಂಕ್ ಅಗರ್‌ವಾಲಾ 19 ರನ್ ಮತ್ತು ಅನುರಾಗ್ ಬಾಜ್‌ಪೈ 44 ರನ್‌ಗಳ ಕೊಡುಗೆ ನೀಡಿದ್ದರು.
ಎಂಕೆ ಅಬ್ಬಾಸ್ 20ರನ್, ನಾಯಕ ಆರ್.ವಿನಯ್ ಕುಮಾರ್ 33 ರನ್, ಶುಐಬ್ ಮ್ಯಾನೇಜರ್ 10 ರನ್, ಪಿ.ದುಬೆ 9 ರನ್, ಅಕ್ಷಯ್ 15 ರನ್ ಗಳಿಸಿದರು. ಸಿ.ಜೆ. ವಿಲಿಯಮ್ 41ಕ್ಕೆ 3 ವಿಕೆಟ್, ಎಸ್.ಅರವಿಂದ್ 31ಕ್ಕೆ1, ಕ್ರಾಂತಿ ಕುಮಾರ್ 14ಕ್ಕೆ 1 ಮತ್ತು ಕೌಶಿಕ್ 24ಕ್ಕೆ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ ವಿವರ
ಬೆಳಗಾವಿ ಪ್ಯಾಂಥರ್ಸ್‌ 20 ಓವರ್‌ಗಳಲ್ಲಿ 153/8( ಅನುರಾಗ್ 44, ವಿನಯ್ ಕುಮಾರ್ 33; ವಿಲಿಯಮ್ 41ಕ್ಕೆ 3).
ಹುಬ್ಬಳ್ಳಿ ಟೈಗರ್ಸ್‌ 18.4 ಓವರ್‌ಗಳಲ್ಲಿ 156/6( ವಿಲಿಯಮ್ ಔಟಾಗದೆ 39, ಡಿ.ನೇಗಿ 30, ಭರತ್ ಔಟಾಗದೆ 27; ಸಾಕುಕಾ 25ಕ್ಕೆ2).

ಬಳ್ಳಾರಿ ಟಸ್ಕರ್ಸ್‌ ಫೈನಲ್‌ಗೆ 
ನಾಯಕ ಅಮಿತ್ ವರ್ಮ ಅವರ ಆಲ್‌ರೌಂಡ್ ಪ್ರದರ್ಶನದ ನೆರವಿನಲ್ಲಿ ಬಳ್ಳಾರಿ ಟಸ್ಕರ್ಸ್‌ ತಂಡ ಇಂದು ಕೆಪಿಎಲ್‌ನ ಮೊದಲ ಸೆಮಿಫೈನಲ್‌ನಲ್ಲಿ ಮೈಸೂರು ವಾರಿಯರ್ಸ್‌ ವಿರುದ್ಧ 10 ರನ್‌ಗಳ ರೋಚಕ ಜಯ ದಾಖಲಿಸಿ ಫೈನಲ್ ತಲುಪಿದೆ.
ಅ.2ರಂದು ನಡೆಯಲಿರುವ ಫೈನಲ್‌ನಲ್ಲಿ ಹಬ್ಬಳ್ಳಿ ಟೈಗರ್ಸ್‌ ತಂಡವನ್ನು ಎದುರಿಸಲಿದೆ.
ಗೆಲುವಿಗೆ 158 ರನ್‌ಗಳ ಸವಾಲನ್ನು ಪಡೆದ ಬಳ್ಳಾರಿ ಟಸ್ಕರ್ಸ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 147 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಮಿತ್ ವರ್ಮ 24ಕ್ಕೆ 2 ವಿಕೆಟ್, ಪ್ರಸಿದ್ಧ ಕೃಷ್ಣ , ಐಜಿ ಅನಿಲ್ ಮತ್ತು ಲಝಾರುಸ್ ತಲಾ ಒಂದು ವಿಕೆಟ್ ಹಂಚಿಕೊಂಡರು.
 ರಾಜು ಭಟ್ಕಳ್ 47ರನ್, ಎ.ಎ.ಜೋಶಿ 30 ರನ್, ಅರ್ಜುನ್ ಹೊಯ್ಸಳ್ 15ರನ್, ಅಕ್ಷಯ್ ಕೊದಾತ್ 14 ರನ್, ಎಂಕೆ ಪಾಂಡೆ 12 ರನ್, ಗೌತಮ್ ಔಟಾಗದೆ 15 ರನ್ ಗಳಿಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.
ಇದಕ್ಕೂ ಮೊದಲು ಟಾಸ್ ಜಯಿಸಿದ್ದ ಮೈಸೂರು ವಾರಿಯರ್ಸ್‌ ತಂಡ ಬಳ್ಳಾರಿ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಬಳ್ಳಾರಿ ಟಸ್ಕರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತ್ತು.
ಆರಂಭಿಕ ದಾಂಡಿಗ ಕೆಬಿ ಪವನ್ 62 ರನ್(47ಎ, 7ಬೌ,1ಸಿ), ಆರ್‌ಪಿ ಕದಮ್ 28ರನ್, ನಾಯಕ ಅಮಿತ್ ವರ್ಮ 32 ರನ್, ಬಿ.ಅಖಿಲ್ ಔಟಾಗದೆ 14 ರನ್ ಗಳಿಸಿದ್ದರು.
ಕದಮ್ ಮತ್ತು ಪವನ್ ಮೊದಲ ವಿಕೆಟ್‌ಗೆ 7.4 ಓವರ್‌ಗಳಲ್ಲಿ 55 ರನ್ ದಾಖಲಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News