×
Ad

ವಿಶ್ವಸಂಸ್ಥೆಯಲ್ಲಿ ಮಸೂದ್‌ನನ್ನು ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಯತ್ನಕ್ಕೆ ಚೀನಾ ಅಡ್ಡಗಾಲು

Update: 2016-10-02 00:18 IST

ಬೀಜಿಂಗ್,ಅ.1: ಪಾಕ್ ಮೂಲದ ಉಗ್ರಗಾಮಿ ಸಂಘಟನೆ ಜೈಶೆ ಮುಹಮ್ಮದ್‌ನ ನಾಯಕ ಮಸೂದ್ ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಮನವಿಗೆ ವಿಶ್ವಸಂಸ್ಥೆಯಲ್ಲಿ ತಾನು ವಿಧಿಸಿದ್ದ ತಡೆಯನ್ನು ವಿಸ್ತರಿಸಿರುವುದಾಗಿ ಚೀನಾ ಶನಿವಾರ ತಿಳಿಸಿದೆ. ಬೀಜಿಂಗ್‌ನ ಈ ನಡೆಯು ಭಾರತ-ಚೀನಾ ಬಾಂಧವ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆಯೆನ್ನಲಾಗಿದೆ. ಮಸೂದ್‌ನನ್ನು ಭಯೋತ್ಪಾದಕನೆಂದು ಘೋಷಿಸಬೇಕೆಂದು ಭಾರತ ವಿಶ್ವಸಂಸ್ಥೆಗೆ ಮಾಡಿದ್ದ ಮನವಿಗೆ ಕಳೆದ ಎಪ್ರಿಲ್‌ನಲ್ಲಿ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾದ ಚೀನಾ ವೀಟೋ ಪ್ರಯೋಗಿಸುವ ಮೂಲಕ ತಾಂತ್ರಿಕವಾಗಿ ತಡೆ ವಿಧಿಸಿತ್ತು. ಇದೀಗ ಚೀನಾವು ಈ ತಡೆಯನ್ನು ಇನ್ನೂ ಆರು ತಿಂಗಳಿಗೆ ವಿಸ್ತರಿಸಿದೆ. ಈ ವರ್ಷದ ಆರಂಭದಲ್ಲಿ ಅಝರ್‌ಗೆ ಜಾಗತಿಕ ಮಟ್ಟದಲ್ಲಿ ನಿಷೇಧ ವಿಧಿಸುವ ಭಾರತದ ಯತ್ನವನ್ನು ಚೀನಾವು, ಪಾಕಿಸ್ತಾನದ ಸಹಕಾರದೊಂದಿಗೆ ತಡೆದಿತ್ತು.
 
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 14 ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಸಮ್ಮತಿಸಿದ್ದವು. ಆದರೆ ಚೀನಾವು ತನ್ನ ವೀಟೋ ಅಧಿಕಾರವನ್ನು ಪ್ರಯೋಗಿಸುವ ಮೂಲಕ ಅದನ್ನು ತಡೆಹಿಡಿಯುವಲ್ಲಿ ಸಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News