ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡ ಪಾಕ್
ವಾಷಿಂಗ್ಟನ್, ಅ.2: ಭಾರತದ ವಿರುದ್ಧ ಅಣ್ವಸ್ತ್ರ ಪ್ರಯೋಗಿಸುವುದಾಗಿ ಎಚ್ಚರಿಕೆ ನೀಡಿರುವ ಪಾಕಿಸ್ತಾನ ಹೇಳಿಕೆ ಬಗ್ಗೆ ಅಮೆರಿಕದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿವಾದದ ಬಗ್ಗೆ ವಿಶ್ವಸಂಸ್ಥೆ ಹಾಗೂ ವಿಶ್ವದ ಪ್ರಬಲ ದೇಶಗಳ ಹಸ್ತಕ್ಷೇಪದ ಮಧ್ಯಸ್ಥಿಕೆಗೆ ಪಾಕಿಸ್ತಾನ ಮಾಡುತ್ತಿರುವ ಪ್ರಯತ್ನಗಳು ನೆಲಕಚ್ಚಲು ಈ ಹೇಳಿಕೆ ಕಾರಣವಾಗಿದೆ.
"ಅಣ್ವಸ್ತ್ರ ಸಾಮರ್ಥ್ಯ ಹೊಂದಿದ ದೇಶಗಳಿಗೆ ಅಣ್ವಸ್ತ್ರ ಹಾಗೂ ಕ್ಷಿಪಣಿ ಪ್ರಯೋಗವನ್ನು ನಿರ್ಬಂಧಿಸುವ ಸ್ಪಷ್ಟವಾದ ಹೊಣೆಗಾರಿಕೆ ಇದೆ" ಎಂದು ಒಬಾಮ ಆಡಳಿತ ಹೇಳಿದೆ. ಈ ಸಂಬಂಧ ರಕ್ಷಣಾ ಇಲಾಖೆ ವಕ್ತಾರ ಮಾರ್ಕ್ ಟೋನರ್ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಅಣ್ವಸ್ತ್ರವನ್ನು ಜಿಹಾದಿ ಗುಂಪುಗಳು ಪಡೆದು ಆತ್ಮಹತ್ಯಾ ಬಾಂಬರ್‌ಗಳು ಬಳಸುವ ಅಪಾಯವಿದೆ ಎಂದು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಆತಂಕ ವ್ಯಕ್ತಪಡಿಸಿದ್ದಾರೆ.
ಉರಿ ದಾಳಿ ಘಟನೆಯು ಪಾಕಿಸ್ತಾನ ಗಡಿಯಾಚೆಗೆ ಭಯೋತ್ಪಾದನೆ ನಡೆಸುತ್ತಿದೆ ಎನ್ನುವುದಕ್ಕೆ ನಿದರ್ಶನ ಎಂಬ ಸ್ಪಷ್ಟ ನಿಲುವು ಅಮೆರಿಕದ್ದು ಎಂದು ಟೋನರ್ ಹೇಳಿದ್ದಾರೆ. ಉರಿ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ದಾಳಿಯನ್ನು ಅಮೆರಿಕದ ಸಂಸದ ಸ್ಟೇನಿ ಹೋಯರ್ ಸಮರ್ಥಿಸಿದ್ದಾರೆ. ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತದ ನಿಲುವನ್ನು ಬೆಂಬಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.