×
Ad

ಕೋರ್ಟ್ ಪ್ರಕರಣ ಕಡಿಮೆ ಮಾಡಲು ಸರಕಾರಕ್ಕೆ ಮಹತ್ವದ ಸಲಹೆ ನೀಡಿದ ಸಿಜೆ

Update: 2016-10-02 08:55 IST

ಹೊಸದಿಲ್ಲಿ, ಅ.2: ಸರಕಾರ ಹಾಗೂ ಕೆಲ ಇಲಾಖೆಗಳು ನಿರ್ದಿಷ್ಟವಾದ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥವಾಗಿರುವ ಹಾಗೂ ನಿರ್ಲಕ್ಷ್ಯ ವಹಿಸಿರುವ ಕಾರಣದಿಂದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಗಿರುವ "ತಪ್ಪಿಸಬಹುದಾದ ಹೊರೆ" ಕಡಿಮೆ ಮಾಡಲು ಕಾನೂನು ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಆಗ್ರಹಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯೊಂದನ್ನು ರಚಿಸಿ, "ನ್ಯಾಯಾಲಯ ವ್ಯಾಪ್ತಿಯಿಂದ ಹೊರಗೆ ಇತ್ಯರ್ಥಪಡಿಸಬಹುದಾದ ಸಂದರ್ಭದಲ್ಲಿ ನಾಗರಿಕರ ವಿರುದ್ಧದ ದಾವೆಗಳನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಲು ಸೂಚಿಸಬೇಕು" ಎಂದು ಅವರು ಸಲಹೆ ಮಾಡಿದ್ದಾರೆ.

ರಾಷ್ಟ್ರೀಯ ನ್ಯಾಯಾಂಗ ಸೇವಾ ಪ್ರಾಧಿಕಾರದ ಹೊಸ ಧ್ಯೇಯಗೀತೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೆಲ ಅನಗತ್ಯ ಪ್ರಕರಣಗಳು ನ್ಯಾಯಾಲಯ ಕಟ್ಟೆ ಏರುವ ಮುನ್ನ ಆಡಳಿತಾತ್ಮಕವಾಗಿ ಅವನ್ನು ಬಗೆಹರಿಸಬೇಕೇ ಎಂದು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.

"ನ್ಯಾಯಾಂಗದ ಕೆಲಸ ನ್ಯಾಯ ನೀಡುವುದು. ಅದು ಸರಕಾರದ ಕೆಲಸವೂ ಅಲ್ಲವೇ? ಎಲ್ಲವಕ್ಕೂ ನ್ಯಾಯಾಲಯಕ್ಕೆ ಹೋಗುವಂತೆ ಸಾರ್ವಜನಿಕರಿಗೆ ಒತ್ತಡ ತರುವ ಸ್ಥಿತಿ ಏಕೆ? ಇದನ್ನು ತಪ್ಪಿಸಲು ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News