ಜಲಸಮಾಧಿಯಾಗಹೊರಟ ಸ್ವಾತಂತ್ರ್ಯ ಯೋಧನನ್ನು ರಕ್ಷಿಸಿದ ಪೊಲೀಸರು
ಆಗ್ರಾ, ಅ.2: ಮದ್ಯಪಾನ ಚಟದ ವಿರುದ್ಧ ಅಭಿಯಾನ ನಡೆಸುತ್ತಿದ್ದ 98ರ ಹರೆಯದ ಸ್ವಾತಂತ್ರ ಹೋರಾಟಗಾರನೊಬ್ಬ ಆಗ್ರಾದಲ್ಲಿ ಯುಮುನಾ ನದಿಗೆ ಹಾರಲು ಪ್ರಯತ್ನಿಸಿದ್ದು, ಪೊಲೀಸರು ಆತನನ್ನು ತಡೆದಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಂಪೂರ್ಣ ಪಾನ ನಿಷೇಧಕ್ಕೆ ಆಗ್ರಹಿಸಿ ತಾನು ‘ಜಲ ಸಮಾಧಿ’ಯೊಂದನ್ನು ಕೈಗೊಳ್ಳಲಿದ್ದೇನೆಂದು ಚಿಮ್ಮನ್ ಲಾಲ್ ಜೈನ್ ಎಂಬ ಈ ವೃದ್ಧ ಕೆಲವು ದಿನಗಳ ಹಿಂದೆ ಹೇಳಿದ್ದರು. ಅವರು ತನ್ನ ಬೆಂಬಲಿಗರು ಹಾಗೂ ಗರೀಬ್ ಸೇನಾದ ಕಾರ್ಯಕರ್ತರೊಂದಿಗೆ ಯಮುನಾ ನದಿಯೆಡೆಗೆ ಹೋಗುತ್ತಿದ್ದರು. ಛಟ್ಟಾ ಠಾಣೆಯ ಪೊಲೀಸರು ಅವರ ಮೆರವಣಿಗೆಯನ್ನು ತಡೆದರು.
ಜೈನ್ ಹಾಗೂ ಅವರ ಬೆಂಬಲಿಗರು ರಸ್ತೆಯಲ್ಲೇ ಕುಳಿತು ಘೋಷಣೆ ಕೂಗತೊಡಗಿದರು.
ಅವರು ಸಾಯುವುದಕ್ಕೆ ತಾವು ಅವಕಾಶ ನೀಡಲಾರೆವು. ಅವರು ಸಮಾಜಕ್ಕೆ ಅಷ್ಟು ಅಮೂಲ್ಯವಾಗಿದ್ದಾರೆಂದು ಪೊಲೀಸ್ ಅಧಿಕಾರಿ ಶತ್ರುಮಂಜಯ್ ಕುಮಾರ್ ಪಿಟಿಐಗೆ ತಿಳಿಸಿದರು. ಸುಮಾರು ಅರ್ಧ ತಾಸಿನ ಮನವೊಲಿಕೆಯ ಬಳಿಕ ಜೈನ್‌ರನ್ನು ಬಲಾತ್ಕಾರವಾಗಿ ಪೊಲೀಸ್ ಜೀಪೊಂದರಲ್ಲಿ ಕುಳ್ಳಿರಿಸಿ ಠಾಣೆಗೆ ಒಯ್ಯಲಾಯಿತು.
ಮುಖ್ಯವಾಗಿ ದಲಿತ ಬಸ್ತಿಗಳಲ್ಲಿ ಮದ್ಯಪಾನ ಚಟದ ವಿರುದ್ಧ ತನ್ನ ‘ಸತ್ಯಾಗ್ರಹ’ವನ್ನು ಮುಂದುವರಿಸುವೆನೆಂದು ಬಿಡುಗಡೆಯ ಬಳಿಕ ಜೈನ್ ಹೇಳಿದರು.
1942ರಲ್ಲಿ ಜೈನ್ ಕ್ವಿಟ್ ಇಂಡಿಯಾ ಚಳವಳಿಯ ಭಾಗವಾದ ಜೈಲ್ ಭರೊ ಚಳವಳಿಯಲ್ಲಿ ಭಾಗವಹಿಸಿದ್ದರು. 1962ರಲ್ಲಿ ಅವರು, ಫತೇಪುರ ಸಿಕ್ರಿಯಲ್ಲಿ ಮದ್ಯ ಮಾರಾಟ ತಡೆಯುವ ಚಳವಳಿಯೊಂದನ್ನು ಆರಂಭಿಸಿದ್ದರು.