ಹೈಕೋರ್ಟ್ ಆದೇಶಕ್ಕೆ ಜಗ್ಗದ ನಿತೀಶ್ ಬಿಹಾರದಲ್ಲಿ ಹೊಸ ಪಾನ ನಿಷೇಧ ಕಾಯ್ದೆ ಜಾರಿ
ಹೊಸದಿಲ್ಲಿ, ಅ.2: ಪಾಟ್ನಾ ಹೈಕೋರ್ಟ್ ಬಿಹಾರದ ಮದ್ಯ ನಿಷೇಧ ಕಾಯ್ದೆಯನ್ನು ರದ್ದುಪಡಿಸಿದ ಎರಡೇ ದಿನಗಳಲ್ಲಿ ನಿತೀಶ್ ಕುಮಾರ್ ಸರಕಾರವು ವಿವಾದಾತ್ಮಕ ಬಿಹಾರ ಮದ್ಯಪಾನ ನಿಷೇಧ ಮತ್ತು ಅಬಕಾರಿ ಕಾಯ್ದೆ-2016ನ್ನು ಜಾರಿಗೊಳಿಸಿದೆ. ಇದು, 1915ರ ಬಿಹಾರ ಅಬಕಾರಿ ಕಾಯ್ದೆಯ ಈ ಹಿಂದಿನ ತಿದ್ದುಪಡಿಗಳಿಗಿಂತಲೂ ಕಠಿಣವಾಗಿದ್ದು, ದಂಡದ ದೃಷ್ಟಿಯಲ್ಲಿ ಕ್ರೂರ ಶಾಸನವಾಗಿದೆಯೆಂದು ವಿಮರ್ಷಕರು ಹೇಳುತ್ತಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ, ಮದ್ಯ ನಿಷೇಧದ ಕಟ್ಟಾ ಹೋರಾಟಗಾರ ನಿತೀಶ್, ಎ.5ರಂದು ಈ ಕಾಯ್ದೆ ಜಾರಿಗೆ ತಂದಿದ್ದರು. ಅದನ್ನು ಹೈಕೋರ್ಟ್ ರದ್ದುಪಡಿಸಿದ ಬಳಿಕ, ಹೊಸ ಮದ್ಯ ನಿಷೇಧ ಕಾಯ್ದೆಯ ಜಾರಿಯ ಕುರಿತು ಚರ್ಚಿಸಲು ಅವರು, ರವಿವಾರ ಸಂಪುಟ ಸಭೆಯೊಂದನ್ನು ಕರೆದಿದ್ದರು.
ಆದರೆ, ಹಳೆಯ ಕಾಯ್ದೆಯ ದಂಡ ಪದ್ಧತಿಯನ್ನು ‘ನ್ಯಾಯಬಾಹಿರ ಹಾಗೂ ಕ್ರೂರ’ ಎಂದು ನ್ಯಾಯಾಲಯ ಹೇಳಿರುವ ಹಿನ್ನಲೆಯಲ್ಲಿ, ಅ.2ಕ್ಕೆ ನಿಗದಿಯಾಗಿರುವ ಹೊಸ ಕಾಯ್ದೆಯ ಅಧಿಸೂಚನೆಯ ಬಗ್ಗೆ ರಾಜ್ಯ ಸರಕಾರ ಮರು ಚಿಂತನೆ ನಡೆಸಬೇಕೆಂದು ಬಿಜೆಪಿ ಎಚ್ಚರಿಸಿತ್ತು.