×
Ad

9 ಸಿಬ್ಬಂದಿಗಳ ಸಹಿತ ಪಾಕ್ ದೋಣಿ ತಟರಕ್ಷಣಾ ಪಡೆಯ ವಶಕ್ಕೆ

Update: 2016-10-02 22:31 IST

ಹೊಸದಿಲ್ಲಿ,ಅ.2: ಭಾರತೀಯ ತಟರಕ್ಷಣಾ ಪಡೆಯು ರವಿವಾರ ಬೆಳಿಗ್ಗೆ ಗುಜರಾತ್ ಕರಾವಳಿಯಾಚೆ ಪಾಕಿಸ್ತಾನದ ದೋಣಿಯೊಂದನ್ನು ವಶಪಡಿಸಿಕೊಂಡಿದ್ದು, ಇದು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ದಾಳಿಯ ಭೀತಿಯನ್ನು ಸೃಷ್ಟಿಸಿದೆ.

ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿರುವ ದೋಣಿಯನ್ನು ಪೋರಬಂದರಿಗೆ ತಂದಿದ್ದು, ಅದರಲ್ಲಿದ್ದ ಒಂಭತ್ತು ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.

ಗುಜರಾತ್ ಕರಾವಳಿಯಾಚೆ ಸಮುದ್ರದಲ್ಲಿ ಗಸ್ತು ನಡೆಸುತ್ತಿದ್ದ ಐಸಿಜಿ ಸಮುದ್ರ ಪಾವಕ್ ನೌಕೆಯು ಭಾರತೀಯ ಜಲಪ್ರದೇಶದಲ್ಲಿ ಪಾಕಿಸ್ತಾನದ ದೋಣಿಯನ್ನು ಗಮನಿಸಿ,ಅದನ್ನು ಬೆನ್ನಟ್ಟಿ ವಶಪಡಿಸಿಕೊಂಡಿತು. ತಟರಕ್ಷಣಾ ಪಡೆಯು ಬಂಧಿತ ಪಾಕಿಸ್ತಾನಿಗಳನ್ನು ಹೆಚ್ಚಿನ ತನಿಖೆಗಾಗಿ ಪೋರಬಂದರ್ ಪೊಲೀಸರ ವಶಕ್ಕೊಪ್ಪಿಸುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

 ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸರಕಾರವು ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಮತ್ತು ಕರಾವಳಿಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಿದೆ. ಭಾರತೀಯ ಜಲಪ್ರದೇಶದ ಕಾವಲಿಗಾಗಿ ತಟರಕ್ಷಣಾ ಪಡೆಯು ಹಲವಾರು ನೌಕೆಗಳು ಮತ್ತು ವಿಮಾನಗಳನ್ನು ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News