ಸಂಸತ್ ಕ್ಯಾಂಟೀನ್‌ನಲ್ಲಿ ಮತ್ತೆ ಆಹಾರ ಬೆಲೆ ಏರಿಕೆ ಸಂಭವ
ಹೊಸದಿಲ್ಲಿ, ಅ.2: ಸಂಸದ್ಭವನದ ಕ್ಯಾಂಟೀನ್‌ನಲ್ಲಿ ತಿಂಡಿಗಳ ಬೆಲೆ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆಯಿದೆ. ಆಹಾರ ವಸ್ತುಗಳ ಬೆಲೆ ಹಾಗೂ ಕೇಟರಿಂಗ್ ಘಟಕಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಗಳು ಪರಿಶೀಲನೆಗಾಗಿ ಸದನ ಸಮಿತಿಯೊಂದರ ಮೇಜಿಗೆ ಹೋಗಿವೆ.
ಲೋಕಸಭಾಧ್ಯಕ್ಷರು ರಾಜ್ಯಸಭಾಪತಿಯೊಂದಿಗೆ ಸಮಾಲೋಚಿಸಿ, ಆಹಾರ ವ್ಯವಸ್ಥಾಪನಕ್ಕಾಗಿ ಜಂಟಿ ಸಮಿತಿಯೊಂದನ್ನು ರಚಿಸಿದ್ದಾರೆ. ಅದು, ಸಂಸದ್ಭವನ ಸಂಕೀರ್ಣದಲ್ಲಿರುವ ರೈಲ್ವೆ ಕೇಟರಿಂಗ್ ಘಟಕ ಪೂರೈಸುತ್ತಿರುವ ತಿಂಡಿ-ತಿನಿಸುಗಳ ದರ ಪರಿಷ್ಕರಣೆಯ ಕುರಿತಾಗಿಯೂ ಪರಿಶೀಲಿಸಲಿದೆ.
ಸಂಸತ್ತಿನಲ್ಲಿ ಈ ಕೇಟರಿಂಗ್ ಘಟಕಗಳನ್ನು ನಡೆಸುವುದಕ್ಕಾಗಿ ನೀಡಬೇಕಾದ ಸಬ್ಸಿಡಿಯ ಮಟ್ಟವನ್ನೂ ಸಮಿತಿ ಪರಿಶೀಲಿಸಲಿದೆಯೆಂದು ಲೋಕಸಭಾ ಬುಲೆಟಿನ್ ತಿಳಿಸಿದೆ.
ಎ.ಪಿ.ಜಿತೇಂದರ್ ರೆಡ್ಡಿ ಈ ಸಮಿತಿಯ ಮುಖ್ಯಸ್ಥರಾಗಿದ್ದು, ಲೋಕಸಭೆಯಿಂದ 10 ಹಾಗೂ ರಾಜ್ಯಸಭೆಯಿಂದ 5 ಸೇರಿದಂತೆ 15 ಮಂದಿ ಸದಸ್ಯರಿದ್ದಾರೆ.
ಜನವರಿಯಲ್ಲಿ ಆಹಾರ ವಸ್ತುಗಳ ದರ ಪರಾಮರ್ಶೆಯ ಬಳಿಕ, ರೂ. 18ರ ಸಸ್ಯಹಾರಿ ಥಾಲಿಗೆ ರೂ. 30, ಮಾಂಸಹಾರಿ ಥಾಲಿ ರೂ. 33ರಿಂದ ರೂ. 60, ಮೂರು ಹೊತ್ತಿನ ಊಟ ರೂ. 61ರಿಂದ ರೂ. 90 ಹಾಗೂ ರೂ. 29 ಇದ್ದ ಕೋಳಿ ಪದಾರ್ಥಕ್ಕೆ ರೂ. 40ಕ್ಕೆ ಏರಿಕೆಯಾಗಿತ್ತು.