ಗಾಂಧೀಜಿ ಜನ್ಮಸ್ಥಳ ಮತ್ತು ಗುಜರಾತಿನ 170 ಪಟ್ಟಣಗಳು ಬಯಲು ಶೌಚಮುಕ್ತವೆಂದು ಘೋಷಣೆ
ಹೊಸದಿಲ್ಲಿ,ಅ.2: ಗಾಂಧಿ ಜಯಂತಿಯ ಅಂಗವಾಗಿ ರವಿವಾರ ಮಹಾತ್ಮಾ ಗಾಂಧಿ ಯವರ ಜನ್ಮಸ್ಥಳ ಪೋರಬಂದರ್ ಮತ್ತು ಗುಜರಾತಿನ ಸುಮಾರು 170 ಪಟ್ಟಣಗಳನ್ನು ಬಯಲು ಶೌಚಮುಕ್ತವೆಂದು ಘೋಷಿಸಲಾಗಿದೆ.
ಈ ಸಂದರ್ಭದಲ್ಲಿ ವೀಡಿಯೊ ಕಾನ್‌ಫರೆನ್ಸಿಂಗ್ ಮೂಲಕ ಪೋರಬಂದರಿನ ಜನತೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಸ್ವಾತಂತ್ರವನ್ನು ಗಳಿಸಲು ನಾವೆಲ್ಲರೂ ಸತ್ಯಾಗ್ರಹಿಗಳಾಗುವ ಅಗತ್ಯವಿದೆ ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದರು. ಅದೇ ರೀತಿ ಸ್ವಚ್ಛ ಭಾರತಕ್ಕಾಗಿ ನಾವೆಲ್ಲರೂ ಸ್ವಚ್ಛಗ್ರಹಿಗಳಾಗುವ ಅಗತ್ಯವಿದೆಯೆಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಹೀಗಾಗಿ ಎಲ್ಲ ಗುಜರಾತಿಗಳು ಸ್ವಚ್ಛಗ್ರಹಿ ಗಳಾಗುತ್ತಿದ್ದಾರೆ. ಇದು ಮಹಾತ್ಮಾ ಗಾಂಧಿಯವರಿಗೆ ಮಧ್ಯಂತರ ಕಾಣಿಕೆಯಾಗಿದೆ. 2019ರಲ್ಲಿ ಇಡೀ ದೇಶವು ಸ್ವಚ್ಛಗೊಂಡಾಗ ಅದು ಅವರಿಗೆ ಅಂತಿಮ ಕಾಣಿಕೆಯಾಗ ಲಿದೆ ಎಂದು ಹೇಳಿದರು.
ಗುಜರಾತ್‌ನ 170 ಪಟ್ಟಣಗಳನ್ನು ಬಯಲು ಶೌಚಮುಕ್ತವೆಂದು ಘೋಷಿಸಿದ ಬಳಿಕ ಈ ಸಾಧನೆಗಾಗಿ ರಾಜ್ಯ ಸರಕಾರವನ್ನು ಅಭಿನಂದಿಸಿದ ಅವರು, ಗುಜರಾತವು ಸ್ವಚ್ಛತೆಯಲ್ಲಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.