ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

Update: 2016-10-03 14:36 GMT

ಉಡುಪಿ, ಅ.3: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಎಲ್ಲ ಐವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಉಡುಪಿ ನ್ಯಾಯಾಲಯ ಇಂದು ಆದೇಶ ನೀಡಿದೆ.

ಮಂಗಳೂರು ಜೈಲಿನಲ್ಲಿದ್ದ ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ಮತ್ತು ಹಿರಿಯಡ್ಕ ಜೈಲಿನಲ್ಲಿರುವ ಸಾಕ್ಷ ನಾಶ ಆರೋಪಿಗಳಾದ ಶ್ರೀನಿವಾಸ ಭಟ್, ರಾಘವೇಂದ್ರನನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಳಗ್ಗೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣಂ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಅ.17ರವರೆಗೆ ವಿಸ್ತರಿಸಿ ಆದೇಶಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಹಾಜರಿದ್ದರು. ಬಳಿಕ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಜೈಲಿಗೆ ಕರೆದೊಯ್ಯಲಾಯಿತು. ಕಳೆದ ಬಾರಿ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಕರೆದುಕೊಂಡು ಬರುವಾಗ ಹೆಚ್ಚುವರಿ ಪೊಲೀಸರನ್ನು ನೇಮಕ ಮಾಡಿರುವುದು ಕಂಡುಬಂತು.

ಈಗಾಗಲೇ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು ಪಡೆದಿರುವ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶರ ನ್ಯಾಯಾಲಯಕ್ಕೆ ಜಾಮೀನು ಆದೇಶದ ಪ್ರತಿ, ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಂದು ಲಕ್ಷ ರೂ. ಮೊತ್ತದ ಶೂರಿಟಿಯನ್ನು ಸಲ್ಲಿಸಬೇಕಾಗಿದೆ. ಅದರ ನಂತರ ಕೋರ್ಟ್ ಸೂಚನೆಯಂತೆ ಜೈಲಾಧಿಕಾರಿಗಳು ಅವರನ್ನು ಬಿಡುಗಡೆ ಮಾಡಲಿದ್ದಾರೆ. ಈವರೆಗೆ ಅವುಗಳನ್ನು ಸಲ್ಲಿಸದ ಕಾರಣ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಕೂಡ ವಿಸ್ತರಿಸಲಾಗಿದೆ.

ಪ್ರಕರಣದ ಆರೋಪಿಗಳನ್ನು ಆ.7ರಂದು ಬಂಧಿಸಿರುವುದರಿಂದ ನ.7 (90ದಿನಗಳು)ರ ಒಳಗೆ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಇನ್ನು ಕೇವಲ 35ದಿನಗಳು ಮಾತ್ರ ಉಳಿದಿದ್ದು, ಇದರೊಳಗೆ ತಮ್ಮ ತನಿಖೆಯನ್ನು ಪೂರ್ಣಗೊಳಿಸಬೇಕಾಗಿದೆ. ನ್ಯಾಯಾ ಲಯದ ಮೂಲಕ ನಡೆಸಿರುವ ಭಾಸ್ಕರ್ ಶೆಟ್ಟಿಯ ತಾಯಿ ಮತ್ತು ಸಹೋದರರ ಡಿಎನ್‌ಎ ಪರೀಕ್ಷೆಯ ವರದಿ ಈವರೆಗೆ ಬಂದಿಲ್ಲ.

ಸಲ್ಲಿಕೆಯಾಗದ ಹೈಕೋರ್ಟ್ ಆದೇಶ

ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಯನ್ನು ಸಿಐಡಿಗೆ ಕಸ್ಟಡಿಗೆ ಒಪ್ಪಿಸಬಾರದೆಂಬ ಹೈಕೋರ್ಟ್ ಆದೇಶದ ಪೂರ್ಣ ಪ್ರತಿಯನ್ನು ಆರೋಪಿ ಪರ ವಕೀಲರು ಇಂದು ಕೂಡ ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.

ಆದೇಶದ ಪ್ರತಿ ವಕೀಲರ ಕೈ ಸೇರದ ಹಿನ್ನೆಲೆಯಲ್ಲಿ ಇಂದು ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಹೈಕೋರ್ಟ್ ಪ್ರತಿ ದೊರೆತ ಕೂಡಲೇ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಧೀಶರು ಆರೋಪಿ ಪರ ವಕೀಲರಿಗೆ ಸೂಚಿಸಿದರು. ಮುಂದೆ ಈ ಆದೇಶದ ಪ್ರತಿ ಸಲ್ಲಿಕೆಯಾದ ಬಳಿಕ ಸಿಐಡಿ ಪೊಲೀಸರು ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News