ಔಷಧ ಕಳ್ಳರಿದ್ದಾರೆ...!! ಎಚ್ಚರಿಕೆ
ಬಡರೋಗಿಗಳು ದುಡ್ಡು ಕೊಟ್ಟು ಖರೀದಿಸಿದ ಔಷಧಗಳನ್ನು ನುಂಗುವ ಮಹಾರೋಗಿಗಳ ಬಗ್ಗೆ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಅಂತಹ ಮಹಾರೋಗಿಗಳ ಅಸಲಿಯತ್ತು ಇಲ್ಲಿದೆ ಓದಿ.
ಕೆಲವು ಕಾರ್ಪೊರೇಟ್ ಧಗಾಕೋರ ಆಸ್ಪತ್ರೆಗಳ ಮೋಸದ ಕೆಲವು ನಮೂನೆಗಳ ಕುರಿತಂತೆ ಪತ್ರಿಕೆಯಲ್ಲಿ ಈಗಾಗಲೇ ಲೇಖನಗಳು ಬಂದಿರುವುದನ್ನು ಹೆಚ್ಚಿನವರು ಗಮನಿಸಿರಬಹುದು. ಈ ಧಗಾಕೋರ ಆಸ್ಪತ್ರೆಗಳು ರೋಗಿಗಳನ್ನು ಅತೀ ಹೆಚ್ಚು ಸುಲಿಗೆ ಮಾಡುವುದು, ರೋಗಿಗಳು ಗಂಭೀರ ಸ್ಥಿತಿಯಲ್ಲಿರುವಾಗ ಅಥವಾ ಕೃತಕ ಗಂಭೀರ ಸ್ಥಿತಿ ನಿರ್ಮಿಸುವುದು ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಇತ್ತೀಚಿನ ದಿನಗಳಲ್ಲಿ ಧಗಾಕೋರ ಆಸ್ಪತ್ರೆಗಳಲ್ಲಿ ದಾಖಲಿಸಲ್ಪಟ್ಟ ರೋಗಿಯ ದೇಹದ ಉಷ್ಣಾಂಶ 102ಲಿ ಡಿಗ್ರಿಗೆ ಏರಿದರೆ ಸಾಕು. ರೋಗಿಯ ಕಂಡೀಶನ್ ಕ್ರಿಟಿಕಲ್ ಇದೆ. ಆತನನ್ನು ತಕ್ಷಣ ತೀವ್ರ ನಿಗಾ ಘಟಕಕ್ಕೆ (ಐಸಿಯು) ವರ್ಗಾಯಿಸಿದರೆ ಮಾತ್ರ ಆತನನ್ನು ರಕ್ಷಿಸಬಹುದು. ಒಂದು ವೇಳೆ ಹೀಗೆ ಬಿಟ್ಟರೆ ಜ್ವರ ಮೆದುಳಿಗೇರುವ ಅಪಾಯವಿದೆ ಎಂದು ರೋಗಿಯ ಸಂಬಂಧಿಕರನ್ನು ಭಯಭೀತರನ್ನಾಗಿಸಲಾಗುತ್ತದೆ. (ಕೆಲವು ಸಂದರ್ಭಗಳಲ್ಲಿ ನಿಜಕ್ಕೂ ರೋಗಿಯನ್ನು ಐಸಿಯುಗೆ ದಾಖಲಿಸುವ ಅಗತ್ಯವಿರುತ್ತದೆ.) ರೋಗಿಯನ್ನು ಒಮ್ಮೆ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಿದರೆ ಧಗಾಕೋರರಿಗೆ ಸುಗ್ಗಿಯೋ ಸುಗ್ಗಿ. ತೀವ್ರ ನಿಗಾ ಘಟಕವೆಂದರೆ ಗಂಟೆಗೆ ಇಷ್ಟೆಂದು ಬಿಲ್ಲು ಹಾಕಬಹುದು. ಅದಕ್ಕಿಂತಲೂ ಮಿಗಿಲಾಗಿ ಔಷಧದಲ್ಲಂತೂ ಸಂಪೂರ್ಣ ದರೋಡೆ ಮಾಡಿ ಬಿಡಬಹುದು.
ಒಮ್ಮೆ ರೋಗಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ ಮೇಲೆ ಅಲ್ಲಿ ವೈದ್ಯರು ಸೂಚಿಸುವ ದುಬಾರಿ ಚುಚ್ಚುಮದ್ದು, ಸೋಂಕು ನಿವಾರಕ ಔಷಧ ಇತ್ಯಾದಿಗಳನ್ನು ರೋಗಿಯ ಸಂಬಂಧಿಕರೇ ತಂದು ಕೊಡಬೇಕಾಗುತ್ತದೆ. ಹೀಗೆ ತಂದು ಕೊಡಲಾಗುವ ಎಷ್ಟು ಔಷಧಗಳನ್ನು, ಚುಚ್ಚುಮದ್ದುಗಳನ್ನು ರೋಗಿಗೆ ಬಳಸಲಾಗುತ್ತದೆ ಎಂಬುವುದು ರೋಗಿಗೋ ಆತನ ಸಂಬಂಧಿಕರಿಗೋ ತಿಳಿಯುವುದೇ ಇಲ್ಲ. ಅಲ್ಲಿ ಆಸ್ಪತ್ರೆಯ ಸಿಬ್ಬಂದಿ ಆಡಿದ್ದೇ ಆಟ. ಹೆಚ್ಚಿನ ಯಾವುದೇ ಖಾಯಿಲೆಗಳಿಗಾದರೂ ಹೆಚ್ಚೆಂದರೆ ಒಂದು ಹೊತ್ತಿಗೆ ಎರಡು ವಿಧದ ಆ್ಯಂಟಿ ಬಯೋಟಿಕ್‌ಗಳನ್ನು ದಿನಕ್ಕೆ ಮೂರು ಬಾರಿ ನೀಡಬೇಕಾಗುತ್ತದೆ. ಆದರೆ ಅನೇಕ ಧಗಾಕೋರ ಆಸ್ಪತ್ರೆಗಳು ಅಗತ್ಯಕ್ಕಿಂತ ದುಪ್ಪಟ್ಟು ಇಂಜೆಕ್ಷನ್‌ಗಳನ್ನು ತರಿಸುತ್ತಾರೆ. ಉಳಿದವುಗಳನ್ನು ನೇರವಾಗಿ ಆಸ್ಪತ್ರೆಯ ಔಷಧಾಲಯಕ್ಕೆ ಸಾಗಿಸುತ್ತಾರೆ. ಮರುದಿನ ಪುನಃ ಅಗತ್ಯಕ್ಕಿಂತ ಹೆಚ್ಚು ಔಷಧ ತರಿಸುತ್ತಾರೆ. ಮತ್ತದೇ ಕತೆ ಮುಂದುವರಿಯುತ್ತದೆ. ರೋಗಿಯ ಸಂಬಂಧಿಕರು ತಾವು ತಂದು ಕೊಟ್ಟ ಔಷಧಗಳನ್ನು ರೋಗಿಗೆ ಬಳಸಲಾಗಿದೆ ಎಂದೇ ನಂಬುತ್ತಾರೆ.
Anti venom ಹಾವು ಕಡಿತದ ಪ್ರಕರಣಗಳು:ಹಾವು ಕಡಿತದ ಪ್ರಕರಣಗಳಲ್ಲಿ ಈ ಮೇಲೆ ತಿಳಿಸಿದ ರೀತಿಯ ದರೋಡೆ ಇನ್ನೂ ಜೋರಾಗಿ ನಡೆಯುತ್ತದೆ. (ವಿಷ ನಿರೋಧಕ) ಚುಚ್ಚು ಮದ್ದುಗಳು ಬಹು ದುಬಾರಿ. ಹಾವು ಕಡಿತಕ್ಕೊಳಗಾದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸುತ್ತಾರೆ. ಖಂಡಿತ ಇದು ಬಹು ಅಗತ್ಯವೂ ಹೌದು. ಇಂತಹ ಸಂದರ್ಭಗಳನ್ನು ಧಗಾಕೋರ ಆಸ್ಪತ್ರೆಗಳು ನಗದೀಕರಿಸುತ್ತವೆ. ದುಬಾರಿ ಬೆಲೆಯ ಇಂಜೆಕ್ಷನ್‌ಗಳನ್ನು ಅಗತ್ಯಕ್ಕಿಂತ ಹಲವು ಪಟ್ಟು ಹೆಚ್ಚು ರೋಗಿಯ ಸಂಬಂಧಿಕರಿಂದ ತರಿಸಿ ಮೋಸದ ದಂಧೆಗೆ ಇಳಿಯುತ್ತದೆ. ಹಿರಿಯ ವೈದ್ಯರುಗಳು ಅಭಿಪ್ರಾಯಪಡುವ ಪ್ರಕಾರ ಆಸ್ಪತ್ರೆಗಳಿಗೆ ಬರುವ ಹಾವು ಕಡಿತದ ಪ್ರಕರಣಗಳಲ್ಲಿ ಶೇಕಡಾ 70ರಷ್ಟು ವಿಷ ರಹಿತ ಹಾವುಗಳ ಕಡಿತದ್ದು. ಆದರೆ ಧಗಾಕೋರ ಆಸ್ಪತ್ರೆಯವರು ವಿಷ ನಿರೋಧಕ ಇಂಜೆಕ್ಷನ್‌ಗಳನ್ನು ತರಿಸದೇ ಇರುವುದಿಲ್ಲ...!!! ಯಾವನೇ ವಿಷರಹಿತ ಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದವನನ್ನು ಕೇಳಿ ನೋಡಿ ಅವನಿಗಾಗಿ ಅವನ ಸಂಬಂಧಿಕರಿಂದ ಕಿಲೋಗಟ್ಟಲೆ ವಿಷ ನಿರೋಧಕ ಇಂಜೆಕ್ಷನ್ ತರಿಸಿಲ್ಲದಿದ್ದರೆ ಮತ್ತೆ ಹೇಳಿ.
ಹೆಚ್ಚಿನ ಚಾರಿಟೇಬಲ್ ಹಣೆಪಟ್ಟಿ ಹೊತ್ತ ಆಸ್ಪತ್ರೆಗಳ ಔಷಧ ಕಳ್ಳತನ ಖುಲ್ಲಂ ಖುಲ್ಲಾ... ಆ ಆಸ್ಪತ್ರೆಯ ಸಿಬ್ಬಂದಿ ರೋಗಿ ಡಿಸ್ಚಾರ್ಜ್ ಆಗುವಾಗ ಟೇಬಲ್ ಮೇಲಿನ ಔಷಧಗಳನ್ನು ರೋಗಿಯ ಅನುಮತಿಯೂ ಪಡೆಯದೆ ನೇರವಾಗಿ ಹೊತ್ತೊಯ್ಯುತ್ತಾರೆ. ರೋಗಿ ಅದನ್ನು ಪ್ರಶ್ನಿಸಿದರೆ ಅದು ಚಾರಿಟಿಗೆ (ದಾನ ನೀಡಲು) ಎನ್ನುತ್ತಾರೆ.
ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಬಡವರು. ಅವರು ಆಸ್ಪತ್ರೆಯ ವೆಚ್ಚ ಭರಿಸಲು ಮೊದಲೇ ಸಾಲಸೋಲ ಮಾಡಿರುತ್ತಾರೆ. ಅವರಿಂದ ಕಸಿದುಕೊಂಡು ಇವರು ದಾನ ನೀಡುವುದಂತೆ. ದಾನವನ್ನು ಯಾರ ಕೈಯಿಂದಲಾದರೂ ಬಲಾತ್ಕಾರವಾಗಿ ಪಡೆಯುವುದಿದೆಯೇ... ? ಈ ಔಷಧ ಕಳ್ಳತನದ ಪ್ರಕರಣಗಳಲ್ಲಿ ವೈದ್ಯರದ್ದೋ, ಸಿಬ್ಬಂದಿಯದ್ದೋ ಕೈವಾಡವಿರುತ್ತದೆಂದು ನಾನು ಆರೋಪಿಸುವುದಿಲ್ಲ. ಇಲ್ಲಿ ಅವರೆಲ್ಲಾ ವ್ಯವಸ್ಥೆಯ ಕೈಗೊಂಬೆಗಳು. ಇದನ್ನು ತಡೆಯಲು ಸ್ವತಃ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ಪ್ರಶ್ನಿಸಲು ಕಲಿಯಬೇಕು. ನಿಮ್ಮಿಂದ ಯಾವ ಔಷಧ, ಇಂಜೆಕ್ಷನ್‌ಗಳನ್ನು ಎಷ್ಟು ತರಿಸುತ್ತಾರೋ ಅಷ್ಟೂ ಬಳಸಿದ ಖಾಲಿ ಸೀಸೆಗಳನ್ನು, ಹರಿದ ಸ್ಟ್ರಿಪ್‌ಗಳನ್ನು ನೀವು ಕೇಳಿ ಪಡೆಯಬೇಕು. ಇದರಿಂದ ಸಂಪೂರ್ಣವಾಗಿ ಕಳ್ಳತನಕ್ಕೆ ಕಡಿವಾಣ ಹಾಕಬಹುದೆಂದು ನಾನು ಹೇಳುತ್ತಿಲ್ಲ ಆದರೆ ಖಂಡಿತವಾಗಿಯೂ ನಿಯಂತ್ರಣಕ್ಕೆ ತರಬಹುದು. ನಿಮ್ಮಲ್ಲಿನ ಪ್ರಶ್ನಿಸುವ ಮನೋಭಾವ ಸ್ವಲ್ಪಮಟ್ಟಿಗಾದರೂ ಅವರ ಧೈರ್ಯವನ್ನು ಕೆಡಿಸಬಲ್ಲುದು.
ಈ ಔಷಧ ಕಳ್ಳತನದ ಪ್ರಕರಣಗಳಲ್ಲಿ ವೈದ್ಯರದ್ದೋ, ಸಿಬ್ಬಂದಿಯದ್ದೋ ಕೈವಾಡವಿರುತ್ತದೆಂದು ನಾನು ಆರೋಪಿಸುವುದಿಲ್ಲ. ಇಲ್ಲಿ ಅವರೆಲ್ಲ ವ್ಯವಸ್ಥೆಯ ಕೈಗೊಂಬೆಗಳು. ಇದನ್ನು ತಡೆಯಲು ಸ್ವತಃ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ಪ್ರಶ್ನಿಸಲು ಕಲಿಯಬೇಕು.