×
Ad

ನವಾಝುದ್ದೀನ್ ಸಿದ್ದೀಕಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು!

Update: 2016-10-03 23:40 IST

ಮೀರತ್, ಅ.3: ಬಾಲಿವುಡ್ ನಟ ನವಾಝುದ್ದೀನ್ ಸಿದ್ದೀಕಿ ಮತ್ತು ತನ್ನ ಪತಿ ಸೇರಿದಂತೆ ಇತರ ನಾಲ್ವರ ವಿರುದ್ಧ ಅವರ ಸೋದರನ ಪತ್ನಿ ವರದಕ್ಷಿಣೆ ಕಿರುಕುಳದ ದೂರನ್ನು ಸಲ್ಲಿಸಿದ್ದಾರೆ. ಮಧ್ಯಪ್ರದೇಶದ ಮುಝಫ್ಫರ್‌ನಗರದ ಬುದಾನಾ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ. ಸಿದ್ದೀಕಿ ಈ ಆರೋಪವನ್ನು ನಿರಾಕರಿಸಿದ್ದಾರೆ.

ಮೇ 31ರಂದು ತನ್ನ ಮತ್ತು ಮಿನಾಝುದ್ದೀನ್ ಸಿದ್ದೀಕಿ ವಿವಾಹ ನೆರವೇರಿದ್ದು ಆಗಿನಿಂದಲೂ ತನಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ ಎಂದು ಮೂರು ತಿಂಗಳ ಗರ್ಭಿಣಿಯಾಗಿರುವ ಅಫ್ರೀನ್ ದೂರಿನಲ್ಲಿ ಆರೋಪಿಸಿದ್ದಾರೆ.
ಸೆ.28ರಂದು ಅವರೆಲ್ಲ ತನ್ನನ್ನು ಮನೆ ಬಿಟ್ಟು ಹೋಗುವಂತೆ ಒತ್ತಾಯಿಸಿದ್ದರು. ತಾನು ನಿರಾಕರಿಸಿದಾಗ ನವಾಝುದ್ದೀನ್ ತನ್ನ ಹೊಟ್ಟೆಗೆ ಒದ್ದಿದ್ದರು ಎಂದು ಅವರು ದೂರಿದ್ದಾರೆ.
ತನ್ನ ಪತಿ ತನ್ನೊಂದಿಗೆ ಅಸಹಜ ಲೈಂಗಿಕತೆಗೂ ಪ್ರಯತ್ನಿಸಿದ್ದರು. ಸೆ.28ರಂದು ರಾತ್ರಿ ಮಿನಾಝುದ್ದೀನ್, ಸೋದರರಾದ ನವಾಝುದ್ದೀನ್, ಫೈಝುದ್ದೀನ್ ಮತ್ತು ಮಝುದ್ದೀನ್ ಹಾಗೂ ಸೋದರಿ ಸೈಮಾ ತನ್ನನ್ನು ಮನೆಯಿಂದ ಹೊರದಬ್ಬಲು ಯತ್ನಿಸಿದ್ದರು. ರಾತ್ರಿಯಾಗಿದ್ದರಿಂದ ಮರುದಿನ ಬೆಳಗ್ಗೆ ಹೋಗುವುದಾಗಿ ಅಲವತ್ತುಕೊಂಡರೂ ಅವರು ಕೇಳಲಿಲ್ಲ. ಎಲ್ಲ ಸೇರಿ ತನ್ನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಕ್ಕೆ ತಳ್ಳಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಸಂದರ್ಭ ಸಿದ್ದೀಕಿ ಸೋದರರು ಮನೆಯಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಸ್ಥಗಿತಗೊಳಿಸಿದ್ದರು ಎಂದು ಅಫ್ರೀನ್ ದೂರಿನಲ್ಲಿ ಹೇಳಿದ್ದಾರೆ. ಆದರೆ ಸಿಸಿಟಿವಿ ಫೂಟೇಜ್ ಒದಗಿಸಲು ತಾವು ಸಿದ್ಧವೆಂದು ಸಿದ್ದೀಕಿ ತಿಳಿಸಿದ್ದಾರೆ ಎಂದು ಠಾಣಾಧಿಕಾರಿ ಡಿ.ಕೆ.ತ್ಯಾಗಿ ಹೇಳಿದ್ದಾರೆ.
ತನ್ಮಧ್ಯೆ ನವಾಝುದ್ದೀನ್, ಪ್ರತಿಯೊಂದೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೂ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News