ಬಂದೂಕಿನೊಂದಿಗೆ ಪೋಸ್ ನೀಡಿದ ಎಬಿವಿಪಿ ನಾಯಕ
ಹೊಸದಿಲ್ಲಿ,ಅ.4 : ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಅಮಿತ್ ತನ್ವರ್ ಹಾಗೂ ಇನ್ನಿತರ ಕೆಲವರು ಬಂದೂಕು ಹಿಡಿದುಕೊಂಡು ವಿಶ್ವವಿದ್ಯಾಲಯ ಆವರಣದಲ್ಲಿ ತೆಗೆಸಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದೆ.
ಅಮಿತ್ ಅವರು ಆರೆಸ್ಸೆಸ್ ಸಹಯೋಗಿ ಸಂಸ್ಥೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಗೆ ಸೇರಿದವರಾಗಿರುವುದರಿಂದ ಈ ಫೋಟೋ ವಿಚಾರವನ್ನು ತನಿಖೆ ನಡೆಸಬೇಕೆಂದು ಎನ್ ಎಸ್ ಯು ಐ ಆಗ್ರಹಿಸಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಮೂಲಗಳ ಪ್ರಕಾರ ತನ್ವರ್ ಅವರ ಸಹೋದರನ ಸ್ಮರಣಾರ್ಥ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಯೂನಿಯನ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಆ ಫೋಟೋ ತೆಗೆಯಲಾಗಿತ್ತು.
ಚಿತ್ರದಲ್ಲಿ ಕಾಣಿಸಲಾದ ಬಂದೂಕು ‘ಭದ್ರತಾ ಅಧಿಕಾರಿಗಳಿಗೆ’ ಹಾಗೂಸಾಮಾಜಿಕ ಕಾರ್ಯಕರ್ತನಾಗಿದ್ದ ತನ್ನ ಸಹೋದರನ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಸೇರಿದ್ದಾಗಿತ್ತು ಎಂದು ತನ್ವರ್ ಹೇಳಿಕೊಂಡಿದ್ದಾರೆ.
‘‘ಕಾರ್ಯಕ್ರಮದಲ್ಲಿ ಕೆಲ ಅತಿಥಿಗಳು ಫೋಟೋ ತೆಗೆಸಿಕೊಳ್ಳುವಾಗ ತಮ್ಮಲ್ಲಿದ್ದ ಬಂದೂಕುಗಳನ್ನು ಮೇಜಿನ ಮೇಲಿರಿಸಿದ್ದರು. ಈ ಫೋಟೋವನ್ನು ಅವರು ನನ್ನ ಗಮನಕ್ಕೆ ತಾರದೆ ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆಂದು ತನ್ವರ್ ಹೇಳಿದ್ದಾರೆ.