ಅಲಂಕಾರ ತಜ್ಞನನ್ನು ಕೊಲ್ಲುವಂತೆ ಸೌದಿ ರಾಜಕುಮಾರಿ ಅಂಗರಕ್ಷಕನಿಗೆ ಆದೇಶಿಸಿದರೇ?

Update: 2016-10-04 13:13 GMT

ಪ್ಯಾರಿಸ್, ಅ. 4: ಪ್ಯಾರಿಸ್‌ನಲ್ಲಿ ತನಗಾಗಿ ಕೆಲಸ ಮಾಡುತ್ತಿದ್ದ ಚಿತ್ರ ಕಲಾವಿದ ಹಾಗೂ ಅಲಂಕಾರ ತಜ್ಞನನ್ನು ಕೊಲ್ಲುವಂತೆ ತನ್ನ ಅಂಗರಕ್ಷಕನಿಗೆ ಸೌದಿ ಅರೇಬಿಯದ ರಾಜಕುಮಾರಿಯೊಬ್ಬರು ಆದೇಶ ನೀಡಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. ಘಟನೆಯ ಬಳಿಕ ಮಹಿಳೆಯು ತನಗೆ ರಾಜತಾಂತ್ರಿಕ ರಕ್ಷಣೆಯಿದೆ ಎಂದು ಹೇಳಿಕೊಂಡು ಪ್ಯಾರಿಸ್ ತೊರೆದಿದ್ದಾರೆ.

ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ಮಗಳು 42 ವರ್ಷದ ರಾಜಕುಮಾರಿ ಹಸ್ಸಾ, ‘‘ಈ ನಾಯಿಯನ್ನು ಕೊಲ್ಲು, ಆತ ಬದುಕಲು ಅರ್ಹತೆ ಹೊಂದಿಲ್ಲ’’ ಎಂಬುದಾಗಿ ತನ್ನ ಅಂಗರಕ್ಷಕನಿಗೆ ಹೇಳಿದ್ದರು ಎನ್ನಲಾಗಿದೆ.

ಈ ಅಲಂಕಾರ ಕಲಾವಿದನು ಪ್ಯಾರಿಸ್‌ನ 16ನೆ ಅರಾಂಡಿಸ್‌ಮೆಂಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಚಿತ್ರಗಳನ್ನು ತೆಗೆಯುತ್ತಿದ್ದ ವೇಳೆ ಸಿಕ್ಕಿಬಿದ್ದ ಬಳಿಕ ಸೌದಿ ರಾಜಕುಮಾರಿ ಈ ಆದೇಶ ನೀಡಿದ್ದಾರೆ ಎನ್ನಲಾಗಿದೆ.

ರಾಜಕುಮಾರಿಯ ಸೂಚನೆಯಂತೆ ಅಂಗರಕ್ಷಕನು 53 ವರ್ಷದ ಚಿತ್ರ ಕಲಾವಿದನನ್ನು ಕಟ್ಟಿ ಹಾಕಿ ನಾಲ್ಕು ಗಂಟೆಗಳ ಕಾಲ ಹಲ್ಲೆ ನಡೆಸಿದನು ಹಾಗೂ ತಲೆಗೆ ಹೊಡೆದನು ಎನ್ನಲಾಗಿದೆ ಎಂದು ‘ದ ಲೋಕಲ್’ ವರದಿ ಮಾಡಿದೆ.

ಬಳಿಕ ಆತನನ್ನು ರಾಜಕುಮಾರಿಯ ಪಾದಕ್ಕೆ ಚುಂಬಿಸುವಂತೆ ಮಾಡಿ ಕಟ್ಟಡದಿಂದ ಹೊರದಬ್ಬಲಾಯಿತು ಹಾಗೂ ಇನ್ನೆಂದೂ ಮರಳದಂತೆ ಹೇಳಲಾಯಿತು ಎನ್ನಲಾಗಿದೆ.

ಅಂಗರಕ್ಷಕನನ್ನು ಪ್ಯಾರಿಸ್‌ನಲ್ಲಿ ಬಂಧಿಸಲಾಗಿದ್ದು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ‘ಮೇಲ್ ಆನ್‌ಲೈನ್’ ವರದಿ ಮಾಡಿದೆ. ಬಂದೂಕಿನಿಂದ ಹಿಂಸೆ ನೀಡಿರುವುದು, ಅಪಹರಣ ಮತ್ತು ಅಪಹರಣದಲ್ಲಿ ನೆರವು ನೀಡಿರುವುದು ಸೇರಿದಂತೆ ಹಲವು ಆರೋಪಗಳನ್ನು ಆತ ಎದುರಿಸುತ್ತಿದ್ದಾನೆ.

ತಾನೇನೂ ತಪ್ಪು ಮಾಡಿಲ್ಲ ಎಂಬುದಾಗಿ ರಾಜಕುಮಾರಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಪ್ಯಾರಿಸ್ ತೊರೆದಿದ್ದು, ಈ ಪ್ರಕರಣದಲ್ಲಿ ರಾಜತಾಂತ್ರಿಕ ರಕ್ಷಣೆ ಕೋರಿದ್ದಾರೆ ಎಂದು ‘ಮೇಲ್ ಆನ್‌ಲೈನ್’ ಹೇಳಿದೆ.

ಚಿತ್ರ ಕಲಾವಿದನು ಭವ್ಯ ಅಪಾರ್ಟ್‌ಮೆಂಟ್‌ನ ಒಳಭಾಗದ ಚಿತ್ರಗಳನ್ನು ಮಾಧ್ಯಮಗಳಿಗೆ ಮಾರಾಟ ಮಾಡುವುದಕ್ಕಾಗಿ ತೆಗೆಯುತ್ತಿದ್ದನು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News