ಶೂಟೌಟ್‌ನಲ್ಲಿ ಮುಸ್ಲಿಮ್ ಬ್ರದರ್‌ಹುಡ್ ನಾಯಕ ಸಾವು

Update: 2016-10-04 13:26 GMT

ಕೈರೋ, ಅ. 4: ಈಜಿಪ್ಟ್‌ನ ನಿಷೇಧಿತ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆಯ ಹಿರಿಯ ನಾಯಕರೊಬ್ಬರು ಭದ್ರತಾ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿದ್ದ 61 ವರ್ಷದ ಮುಹಮ್ಮದ್ ಕಮಾಲ್ ಕೈರೋದ ಅಪಾರ್ಟ್‌ಮೆಂಟ್ ಒಂದರಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದಾರೆ ಎಂದು ಈಜಿಪ್ಟ್‌ನ ಸರಕಾರಿ ಮಾಧ್ಯಮ ವರದಿ ಮಾಡಿದೆ. ಕಾಳಗದಲ್ಲಿ ಸಂಘಟನೆಯ ಇನ್ನೋರ್ವ ಪ್ರಮುಖ ಸದಸ್ಯ ಯಾಸಿರ್ ಶಹಾತ ಅಲಿ ರಗಬ್ ಎಂಬವರೂ ಹತರಾಗಿದ್ದಾರೆ.

ಬಸ್ಸಾತೀನ್‌ನಲ್ಲಿರುವ ಅಪಾರ್ಟ್‌ಮೆಂಟನ್ನು ಮುಸ್ಲಿಮ್ ಬ್ರದರ್‌ಹುಡ್‌ನ ಪ್ರಧಾನ ಕಚೇರಿಯನ್ನಾಗಿ ಬಳಸಲಾಗುತ್ತಿದೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ಅಲ್ಲಿಗೆ ದಾಳಿ ನಡೆಸಲಾಯಿತು ಎಂದು ಈಜಿಪ್ಟ್ ಅಧಿಕಾರಿಗಳು ಹೇಳಿದ್ದಾರೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಅಲ್ಲಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕಮಾಲ್ ಮುಸ್ಲಿಮ್ ಬ್ರದರ್‌ಹುಡ್‌ನ ಹಿರಿಯ ನಾಯಕರಾಗಿದ್ದರು. 2013ರಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಸ್ಲಿಮ್ ಬ್ರದರ್‌ಹುಡ್‌ನ ಮುಹಮ್ಮದ್ ಮುರ್ಸಿ ನೇತೃತ್ವದ ಸರಕಾರವನ್ನು ವಜಾಗೊಳಿಸಿ ಅಧಿಕಾರಕ್ಕೆ ಏರಿದ ಬಳಿಕ ಅಧ್ಯಕ್ಷ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ಅಬ್ದುಲ್ ಫತ್ತಾಹ್ ಅಲ್-ಸಿಸಿ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆಯನ್ನು ಈಜಿಪ್ಟ್‌ನಲ್ಲಿ ನಿಷೇಧಿಸಿದ್ದರು.

ಅಂದಿನಿಂದ ನ್ಯಾಯೋಚಿತ ವಿಚಾರಣೆಯಿಲ್ಲದೆ ನೂರಾರು ಮುಸ್ಲಿಮ್ ಬ್ರದರ್‌ಹುಡ್ ಸದಸ್ಯರು ಹಾಗೂ ಸರಕಾರದ ವಿರೋಧಿಗಳನ್ನು ಗಲ್ಲಿಗೇರಿಸಲಾಗಿದೆ ಎಂದು ಮಾನವಹಕ್ಕು ಸಂಘಟನೆಗಳು ಹೇಳಿವೆ.

ಪೊಲೀಸ್ ಠಾಣೆಯೊಂದರಲ್ಲಿ ನಡೆದ ಸ್ಫೋಟ ಸೇರಿದಂತೆ ಡಝನ್ ಶಸ್ತ್ರಾಸ್ತ್ರ ದಾಳಿಗಳಿಗೆ ಸಂಬಂಧಿಸಿ ಅವರು ಪೊಲೀಸರಿಗೆ ಬೇಕಾಗಿದ್ದರು ಎಂದು ಈಜಿಪ್ಟ್‌ನ ಆಂತರಿಕ ಸಚಿವಾಲಯ ಹೊರಡಿಸಿದ ಪ್ರಕಟನೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News