ಪಾಕ್ ವಿರುದ್ಧ ಸರ್ಜಿಕಲ್ ದಾಳಿ ನಕಲಿ, ರುಜುವಾತು ಅಗತ್ಯ: ಸಂಜಯ ನಿರುಪಮ್
ಮುಂಬೈ, ಅ.4: ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ಕ್ರಮಕ್ಕೆ ರಾಜಕೀಯ ಪಕ್ಷಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿರುವಾಗ ಕಾಂಗ್ರೆಸ್ ನಾಯಕ ಸಂಜಯ ನಿರುಪಮ್ ಅವರು, ಕಳೆದ ವಾರದ ಸರ್ಜಿಕಲ್ ದಾಳಿಗಳಿಗೆ ಸರಕಾರವು ಸಾಕ್ಷಾಧಾರವನ್ನು ಒದಗಿಸದಿದ್ದರೆ ಅವು ನಕಲಿ ಎಂಬಂತೆ ಕಂಡುಬರುತ್ತವೆ ಎಂದು ಘೋಷಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ನಿಯಂತ್ರಣ ರೇಖೆಯಾಚೆಯ ಗುಂಡಿನ ದಾಳಿಯನ್ನೇ ಭಾರತವು ಸರ್ಜಿಕಲ್ ದಾಳಿಯೆಂದು ಹೇಳಿಕೊಂಡಿದೆ ಎಂದು ಪಾಕಿಸ್ತಾನವು ಪ್ರತಿಪಾದಿಸಿದೆ.
ಪಾಕ್ ವಿರುದ್ಧ ಸರ್ಜಿಕಲ್ ದಾಳಿಗಳನ್ನು ಪ್ರತಿಯೊಬ್ಬ ಭಾರತೀಯರೂ ಬಯಸುತ್ತಾರೆ, ಕೇವಲ ಬಿಜೆಪಿಯ ರಾಜಕೀಯ ಲಾಭಕ್ಕಾಗಿ ನಕಲಿ ದಾಳಿಗಳನ್ನಲ್ಲ ಎಂದು ನಿರುಪಮ್ ಮಂಗಳವಾರ ಟ್ವೀಟಿಸಿದ್ದಾರೆ.
ಈ ಟ್ವೀಟ್‌ಗೆ ವ್ಯಾಪಕ ಖಂಡನೆಗಳು ವ್ಯಕ್ತವಾದ ಬಳಿಕ ನಿರುಪಮ್,ಎಲ್ಲ ವೀಡಿಯೊ ಫೂಟೇಜ್‌ಗಳನ್ನು ಬಿಡುಗಡೆ ಮಾಡುವಂತೆ ತಾನು ಕೇಳುತ್ತಿಲ್ಲ. ಅದು ರಾಷ್ಟ್ರೀಯ ಭದ್ರತೆಗೆ ಪೂರಕವಲ್ಲದಿರಬಹುದು.ಆದ್ದರಿಂದ ಹಾಗೆ ತಾನು ಯೋಚಿಸಿಯೂ ಇಲ್ಲ. ಆದರೆ ಏನಾದರೊಂದು ರುಜುವಾತು ತೋರಿಸುವ ಅಗತ್ಯವಿದೆ ಎಂದು ಸ್ಪಷ್ಟನೆ ನೀಡಿದರು.
ಸರ್ಜಿಕಲ್ ದಾಳಿಗಳಿಗೆ ಸಾಕ್ಷಾಧಾರ ಕೇಳಿದ್ದಕ್ಕಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರನ್ನು ಬಿಜೆಪಿಯು ಟೀಕಿಸಿರುವ ಸಂದರ್ಭವೇ ನಿರುಪಮ್, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋ ತ್ಪಾದಕರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿಗಳನ್ನು ನಡೆಸಲಾಗಿದೆ ಎಂಬ ಸರಕಾರ ಮತ್ತು ಸೇನೆಯ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ.