×
Ad

ಜಯಲಲಿತಾರ ಆರೋಗ್ಯ ಮಾಹಿತಿ ನೀಡಲು ತಮಿಳುನಾಡು ಸರಕಾರಕ್ಕೆ ಹೈಕೋರ್ಟ್ ನಿರ್ದೇಶ

Update: 2016-10-04 22:48 IST

ಚೆನ್ನೈ,ಅ.4: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಕುರಿತ ನಿಗೂಢತೆ ಶೀಘ್ರವೇ ಬಯಲಾಗ ಬಹುದು. ಅನಾರೋಗ್ಯಕ್ಕೊಳಗಾಗಿರುವ ಅವರ ದೇಹಸ್ಥಿತಿಯ ಬಗ್ಗೆ ಗುರುವಾರದೊಳಗೆ ತನಗೆ ಮಾಹಿತಿ ನೀಡುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಮಂಗಳವಾರ ತಮಿಳು ನಾಡು ಸರಕಾರಕ್ಕೆ ನಿರ್ದೇಶ ನೀಡಿದೆ.

ಎಡಿಎಂಕೆ ನಾಯಕಿ ಜೆ.ಜಯಲಲಿತಾ ಅವರು ಸಾರ್ವಜನಿಕ ಹುದ್ದೆಯಲ್ಲಿದ್ದಾರೆ, ಹೀಗಾಗಿ ಸರಕಾರಿ ಅಧಿಕಾರಿಗಳು ಅ.6 ರೊಳಗೆ ಅವರ ಆರೋಗ್ಯ ಸ್ಥಿತಿಯನ್ನು ಸ್ಪಷ್ಟಪಡಿಸಬೇಕು ಎಂದು ಉಚ್ಚ ನ್ಯಾಯಾಲಯವು ಹೇಳಿತು.
ತೀವ್ರ ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಲಲಿತಾ(68) 12 ದಿನಗಳಿಂದ ಇಲ್ಲಿಯ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಯಲಲಿತಾರ ಆರೋಗ್ಯದ ಕುರಿತು ಸರಕಾರದಿಂದ ಅಧಿಕೃತ ಮಾಹಿತಿಯ ಕೊರತೆ ಹಲವಾರು ಊಹಾಪೋಹಗಳನ್ನು ಸೃಷ್ಟಿಸಿದೆ. ಪೊಲೀಸರ ಕಠಿಣ ಎಚ್ಚರಿಕೆಯ ಹೊರತಾಗಿಯೂ ಅವರು ಮೃತರಾಗಿದ್ದಾರೆಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಜಯಲಲಿತಾ ಹಲವಾರು ದಿನಗಳ ಹಿಂದೆಯೇ ಮೃತರಾಗಿದ್ದಾರೆಂದು ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದ ತಮಿಳು ಲೇಖಕಿ ತಮಿಳಾಚಿ ವಿರುದ್ಧ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದರು.
ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿ ಕುರಿತಂತೆ ಸರಕಾರದಿಂದ ಸ್ಪಷ್ಟನೆ ಕೋರಿ ಸಾಮಾಜಿಕ ಕಾರ್ಯಕರ್ತ ಕೆ.ಆರ್.‘ಟ್ರಾಫಿಕ್’ ರಾಮಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸಲ್ಲಿಸಿದ್ದಾರೆ. ಜಯಲಲಿತಾ ಪ್ರಜ್ಞಾವಸ್ಥೆಯಲ್ಲಿದ್ದಾರೆಯೇ ಮತ್ತು ಮಹತ್ವದ ಸಭೆಗಳನ್ನು ನಡೆಸಲು ಸಮರ್ಥರಿದ್ದಾರೆಯೇ ಎನ್ನುವುದನ್ನು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮುಖ್ಯಮಂತ್ರಿಯವರ ಆರೋಗ್ಯ ಸ್ಥಿತಿ ಕುರಿತಂತೆ ಆಸ್ಪತ್ರೆಯು ನಿಯಮಿತವಾಗಿ ಹೇಳಿಕೆಗಳನ್ನು ಬಿಡುಗಡೆಗೊಳಿಸುತ್ತಿದೆ, ಹೀಗಾಗಿ ಸರಕಾರವು ತುರ್ತಾಗಿ ಉತ್ತರಿಸ ಬೇಕಾದ ಅಗತ್ಯವಿಲ್ಲ ಎಂಬ ಸರಕಾರಿ ವಕೀಲರ ನಿವೇದನೆಗೆ ಮಣೆ ಹಾಕದ ನ್ಯಾಯಾಲಯವು ಅ.6ರೊಳಗೆ ಪಿಐಎಲ್‌ಗೆ ಉತ್ತರಿಸುವಂತೆ ತಾಕೀತು ಮಾಡಿತು.
ಜಯಲಲಿತಾರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಮತ್ತು ಸೋಂಕಿಗಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯು ಸೋಮವಾರ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News