×
Ad

ಚೊಚ್ಚಲ ಟೆಸ್ಟ್ ಆಯೋಜಿಸಲು ಹೋಳ್ಕರ್ ಸ್ಟೇಡಿಯಂ ಸಜ್ಜು

Update: 2016-10-04 23:51 IST

 ಹೊಸದಿಲ್ಲಿ, ಅ.4: ಮಧ್ಯಪ್ರದೇಶದ ಕ್ರಿಕೆಟ್ ಶ್ರೀಮಂತ ಇತಿಹಾಸ ಹೊಂದಿದೆ. ಮುಶ್ತಾಕ್ ಅಲಿ, ರಾಜೇಶ್ ಚೌಹಾಣ್, ನರೇಂದ್ರ ಹಿರ್ವಾನಿ, ಚಂದ್ರಕಾಂತ್ ಪಂಡಿತ್, ಅಮಯ್ ಖುರಾಸಿಯ ಹಾಗೂ ನಮನ್ ಓಜಾ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸಿ ಯಶಸ್ಸು ಕಂಡಿದ್ದಾರೆ.

ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಮೂರನೆ ಟೆಸ್ಟ್ ಪಂದ್ಯ ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ಅ.8 ರಂದು ನಡೆಯಲಿದೆ. ಮಧ್ಯಪ್ರದೇಶದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಪಂದ್ಯವೊಂದು ನಡೆಯುತ್ತಿರುವುದು ವಿಶೇಷವಾಗಿದೆ.

  28,000ಕ್ಕೂ ಅಧಿಕ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಹೋಳ್ಕರ್ ಸ್ಟೇಡಿಯಂಗೆ 2015ರ ನವೆಂಬರ್‌ನಲ್ಲಿ ನಡೆದ ಸಾಮಾನ್ಯ ಮಹಾಸಭೆಯಲ್ಲಿ ಬಿಸಿಸಿಐ ಟೆಸ್ಟ್ ಸ್ಥಾನಮಾನ ನೀಡಿತ್ತು. ಈ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿರುವುದು ಇದೇ ಮೊದಲಲ್ಲ. 2006ರ ಬಳಿಕ ಈ ಸ್ಟೇಡಿಯಂನಲ್ಲಿ ನಾಲ್ಕು ಏಕದಿನ ಪಂದ್ಯಗಳು ಹಾಗೂ ಎರಡು ಐಪಿಎಲ್ ಪಂದ್ಯಗಳು ನಡೆದಿವೆ.

ಭಾರತ ಇಲ್ಲಿ ಆಡಿದ ಎಲ್ಲ ನಾಲ್ಕೂ ಏಕದಿನ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇಂಗ್ಲೆಂಡ್ ವಿರುದ್ಧ ಎರಡು ಬಾರಿ, ವೆಸ್ಟ್‌ಇಂಡೀಸ್ ಹಾಗೂ ದಕ್ಷಿಣ ಆಫ್ರಿಕದ ವಿರುದ್ಧ ತಲಾ ಒಂದು ಬಾರಿ ಪಂದ್ಯ ಜಯ ಸಾಧಿಸಿತ್ತು.

ಹೋಳ್ಕರ್ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಿದೆ. ಚಿಕ್ಕದಾದ ಬೌಂಡರಿ ಲೈನ್ ಬ್ಯಾಟ್ಸ್‌ಮನ್‌ಗಳಿಗೆ ಪೂರಕವಾಗಿದೆ. ಇದೇ ಮೈದಾನದಲ್ಲಿ ವೀರೇಂದ್ರ ಸೆಹ್ವಾಗ್ ಅವರು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಎರಡನೆ ಕ್ರಿಕೆಟಿಗ ಎನಿಸಿಕೊಂಡಿದ್ದರು. 2011ರ ಡಿಸೆಂಬರ್‌ನಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್ 219 ರನ್ ಬಾರಿಸಿದ್ದರು.

ಮಧ್ಯಪ್ರದೇಶದಲ್ಲಿ ಇನ್ನೆರಡು ಅಂತಾರಾಷ್ಟ್ರೀಯ ಗುಣಮಟ್ಟದ ಸ್ಟೇಡಿಯಂಗಳಿವೆ. ಅವುಗಳೆಂದರೆ: ಗ್ವಾಲಿಯರ್‌ನಲ್ಲಿರುವ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂ ಹಾಗೂ ಇಂದೋರ್‌ನಲ್ಲಿರುವ ನೆಹರೂ ಸ್ಟೇಡಿಯಂ. ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಗ್ವಾಲಿಯರ್‌ನಲ್ಲಿ 2010ರಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಏಕದಿನ ಪಂದ್ಯದಲ್ಲಿ ಬರೋಬ್ಬರಿ 200 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News