×
Ad

ಲಾಲಿಗ ಕ್ಲಬ್‌ನೊಂದಿಗೆ ಇಶಾನ್ ಪಂಡಿತಾ ಒಪ್ಪಂದ

Update: 2016-10-05 23:56 IST

  ಕೋಲ್ಕತಾ, ಅ.5: ಬೆಂಗಳೂರಿನ ಹುಡುಗ ಇಶಾನ್ ಪಂಡಿತಾ ಸ್ಪೇನ್‌ನ ವೃತ್ತಿಪರ ತಂಡ ಲಾಲಿಗ ಕ್ಲಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊದಲ ಫುಟ್ಬಾಲ್ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಪಂಡಿತ್ ಹೊಸ ತಂಡ ಸಿಡಿ ಲೆಗನೆಸ್ ಕ್ಲಬ್‌ನ ಅಂಡರ್-19 ತಂಡದೊಂದಿಗೆ ಒಂದು ವರ್ಷ ಅವಧಿಗೆ ಸಹಿ ಹಾಕಿದ್ದಾರೆ.

ಮ್ಯಾಡ್ರಿಡ್‌ನ ಲೆಗಾನೆಸ್ ಕ್ಲಬ್ ಈ ಋತುವಿನಲ್ಲಿ ಸ್ಪೇನ್‌ನ ಅಗ್ರ ಡಿವಿಜನ್ ಫುಟ್ಬಾಲ್‌ನ್ನು ಪ್ರಚಾರಪಡಿಸಲಿದೆ. ಈ ತಂಡ ಪ್ರಸ್ತುತ ಲೀಗ್ ಪಟ್ಟಿಯಲ್ಲಿ 11ನೆ ಸ್ಥಾನದಲ್ಲಿದೆ.

 ಮಂಗಳವಾರ ಪಂಡಿತಾಗೆ ನಂ.50ನೆ ಜರ್ಸಿಯನ್ನು ಹಸ್ತಾಂತರಿಸಲಾಗಿದೆ. ‘‘ಇದೊಂದು ಸ್ಮರಣೀಯ ಕ್ಷಣ. ನನಗೆ ಇನ್ನೂ ತುಂಬಾ ದೂರ ಕ್ರಮಿಸಬೇಕಾಗಿದೆ. ಕೆಲವು ಗೋಲುಗಳನ್ನು ಬಾರಿಸುವುದು ನನ್ನ ಮುಂದಿರುವ ಮೊದಲ ಗುರಿ’’ ಎಂದು ಪ್ರಸ್ತುತ ಸ್ಪೇನ್‌ನಲ್ಲಿರುವ ಪಂಡಿತಾ ಪ್ರತಿಕ್ರಿಯೆ ನೀಡಿದ್ದಾರೆ.

   ‘‘ಇಶಾನ್ ಪಂಡಿತಾ ಭಾರತದಲ್ಲಿ ಆಡಿದ್ದನ್ನು ನಾನು ಈ ತನಕ ನೋಡಿಲ್ಲ. ಆದಾಗ್ಯೂ ಅವರ ಈ ಸಾಧನೆಗೆ ಅಭಿನಂದನೆ ಸಲ್ಲಿಸಲು ಬಯಸುವೆ. ಲಾಲಿಗ ತಂಡದೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ದೊಡ್ಡ ಸಾಧನೆ. ನ್ಯಾಶನಲ್ ಕೋಚ್ ಸ್ಟೀಫನ್ ಕಾನ್‌ಸ್ಟನ್‌ಟೈನ್ ಐಶಾನ್‌ರತ್ತ ಗಮನ ಹರಿಸಬೇಕೆಂದು ವಿನಂತಿಸುವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಆಟಗಾರರು ಭಾರತಕ್ಕೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಶಾನ್ ಅಂಡರ್-20 ತಂಡಕ್ಕೆ ಆಯ್ಕೆಯಾಗಲೂಬಹುದು’’ ಎಂದು ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಹೇಳಿದ್ದಾರೆ.

ಎಐಎಫ್‌ಎಫ್ ಅಂಡರ್-20 ವಿಶ್ವಕಪ್‌ನ ಆತಿಥ್ಯ ವಹಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಇತ್ತೀಚೆಗೆ ಗೋವಾಕ್ಕೆ ಆಗಮಿಸಿದ್ದ ಫಿಫಾ ಅಧ್ಯಕ್ಷರಾದ ಗಿಯಾನಿ ಇನ್ಫಾಂಟಿನೊರೊಂದಿಗೆ ಮಾತುಕತೆ ನಡೆಸಿದ್ದಾರೆ.

ಸ್ಪೇನ್‌ನ ಲಾಲಿಗ ಎ ದರ್ಜೆಯ ಕ್ಲಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿರುವ ಇಶಾನ್ ಪಂಡಿತಾಗೆ ಹೃತ್ಪೂರ್ವಕ ವಂದನೆಗಳು. ಈ ಕಿರಿಯ ವಯಸ್ಸಿನಲ್ಲಿ ಆತನ ಸಾಧನೆ ಅತ್ಯದ್ಭುತವಾಗಿದೆ ಎಂದು ಪಟೇಲ್ ಬುಧವಾರ ಟ್ವೀಟ್ ಮಾಡಿದ್ದಾರೆ.

‘‘ಸ್ಪೇನೀಶ್ ಲೀಗ್‌ನಲ್ಲಿ ಆಡುವುದು ಒಂದು ಅದ್ಭುತ ಸಾಧನೆ. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. ಯುರೋಪ್‌ನಲ್ಲಿ ಆಡಬಲ್ಲ ಇನ್ನಷ್ಟು ಪ್ರತಿಭಾವಂತ ಆಟಗಾರರನ್ನು ಭಾರತೀಯ ಕ್ಲಬ್ ತಯಾರಿಗೊಳಿಸಲಿದೆ ಎಂಬ ವಿಶ್ವಾಸ ನನಗಿದೆ’’ ಎಂದು ಎಐಎಫ್‌ಎಫ್ ಹಿರಿಯ ಉಪಾಧ್ಯಕ್ಷ ಸುಬ್ರತಾ ದತ್ತ ಹೇಳಿದ್ದಾರೆ.

ಕಾಶ್ಮೀರ ಮೂಲದ ಭಾರತದ ಸ್ಟ್ರೈಕರ್ ಇಶಾನ್ ಪಂಡಿತಾ 2009ರಲ್ಲಿ ಬೆಂಗಳೂರಿಗೆ ಬರುವ ಮೊದಲು ಫಿಲಿಪ್ಪೈನ್ಸ್‌ನಲ್ಲಿ ಬಾಲ್ಯ ಕಳೆದಿದ್ದರು. ಗೆರಾಫೆ ಕ್ಲಬ್ ಕೂಡ ಸಹಿ ಹಾಕಲು ಆಸಕ್ತಿ ತೋರಿತ್ತು. ಮಾರ್ಚ್‌ನಲ್ಲಿ ಗೆರಾಫೆ ತಂಡದೊಂದಿಗೆ ಟ್ರಯಲ್ಸ್ ನಡೆಸಿರುವ ಪಂಡಿತಾ ಕಳೆದ ವರ್ಷಾಂತ್ಯದಲ್ಲಿ ಸ್ಪೇನೀಶ್ ಎರಡನೆ ಡಿವಿಜನ್‌ನಲ್ಲಿ ಅಲ್ಮೇರಿಯದ ಜೂನಿಯರ್ ತಂಡದಲ್ಲಿ 8 ತಿಂಗಳ ಕಾಲ ಆಡಿದ್ದರು. ಆಗ ಅವರಿಗೆ 18 ವರ್ಷ ತುಂಬದ ಕಾರಣ ವೃತ್ತಿಪರ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News