3.9 ಲಕ್ಷ ಯುರೊ ಹಣವನ್ನು ಈ ಮೂವರು ಅಕ್ರಮವಾಗಿ ಸಾಗಿಸಿದ್ದು ಹೇಗೆ ಗೊತ್ತೇ?
ಹೊಸದಿಲ್ಲಿ, ಅ.6: ಗುದನಾಳದಲ್ಲಿ 3.9 ಲಕ್ಷ ಯುರೊ (2.9 ಕೋಟಿ) ಹುದುಗಿಸಿಕೊಂಡಿದ್ದ ಮೂವರನ್ನು ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಲಾಗಿದೆ. ಒಂದು ಲ್ಯಾಂಬೊರ್ಗಿನಿ ವಾಹನ ಖರೀದಿಸಲು ಸಾಕಾಗುವಷ್ಟು ಹಣವನ್ನು ಪ್ಲಾಸ್ಟಿಕ್ ಪೌಚ್‌ಗಳಲ್ಲಿ ಸುತ್ತಿ, ಗುದದ್ವಾರದ ಮೂಲಕ ಗುದನಾಳಕ್ಕೆ ತೂರಿಸಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಯದ ಮೂಲಗಳು ಹೇಳಿವೆ.
ದುಬೈನಿಂದ ಮುಂಜಾನೆ 4:30ರ ವೇಳೆಗೆ ಆಗಮಿಸಿದ ವಿಮಾನದಲ್ಲಿ ಆಗಮಿಸಿದ್ದ ಇವರನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂತು. ತಪಾಸಣೆ ವೇಳೆ ಅವರ ರುಮಾಲಿನಲ್ಲಿ ಕೆಲ ಕರೆನ್ಸಿ ನೋಟುಗಳು ಪತ್ತೆಯಾದವು. ಆದರೆ ಬಹುತೇಕ ಹಣವನ್ನು ಅವರು ಗುದನಾಳದಲ್ಲಿ ಹುದುಗಿಸಿಟ್ಟುಕೊಂಡಿದ್ದರು. ಇದು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿರುವ ಅತಿದೊಡ್ಡ ಪ್ರಮಾಣದ ಮೊತ್ತವಾಗಿದೆ.
ಇಂಡಿಗೊ ವಿಮಾನದಲ್ಲಿ ಪ್ರಯಾಣಿಸಲು ಚೆಕ್ ಇನ್ ಕೌಂಟರ್ ಬಳಿಗೆ ಹೋಗುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ಅವರನ್ನು ವಶಕ್ಕೆ ಪಡೆಯಲಾಯಿತು. ವಿದೇಶದಲ್ಲಿ ವಹಿವಾಟು ನಡೆಸಲು ಈ ಹಣವನ್ನು ಸಾಗಿಸುತ್ತಿದ್ದುದಾಗಿ ಅವರು ಹೇಳಿಕೊಂಡಿದ್ದಾರೆ. ಇದರಲ್ಲಿ ದೊಡ್ಡ ಜಾಲವೇ ಒಳಗೊಂಡಿರಬೇಕು ಎಂಬ ಶಂಕೆ ಇದ್ದು, ತನಿಖೆ ಮುಂದುವರಿದಿದೆ.