ಬಾಬಾ ರಾಮ್ ದೇವ್ ಪ್ರಕಾರ ಪ್ರಧಾನಿ ಮೋದಿಯವರ ಮುಂದಿನ ಟಾರ್ಗೆಟ್ ಯಾರು?

Update: 2016-10-06 07:19 GMT

ಹೊಸದಿಲ್ಲಿ, ಅ.6: ಭಾರತೀಯ ಸೇನೆ ಇತ್ತೀಚೆಗೆ ಗಡಿಯಾಚೆ ನಡೆಸಿದ ಸೀಮಿತ ದಾಳಿಗಳಿಗೆ ಪುರಾವೆಯನ್ನು ರಾಜಕೀಯ ನಾಯಕರುಗಳು ಕೇಳುತ್ತಿರುವಂತೆಯೇ ಯೋಗ ಗುರು ಬಾಬಾ ರಾಮದೇವ್ ಹೊಸ ಹೇಳಿಕೆಯನ್ನು ನೀಡಿದ್ದಾರೆ. ಭಾರತ ಈಗ ಉಗ್ರ ಹಫೀಝ್ ಸಯೀದ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹೀಂರತ್ತ ತನ್ನ ಗಮನ ಹರಿಸಬೇಕೆಂದು ಅವರು ಹೇಳಿದ್ದಾರೆ.

ಭಾರತೀಯ ಸೇನೆ ನಡೆಸುವ ಸೀಮಿತ ದಾಳಿಗೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಯೋಗ ಗುರು, ಭಾರತ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿರುವುದು ಇದು ಮೊದಲನೇ ಬಾರಿ ಎಂದು ಹೇಳಿದ್ದಾರೆ.

ಉಗ್ರ ಹಫೀಝ್ ಸಯೀದ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹೀಂ ಬಗ್ಗೆ ಮಾತನಾಡುತ್ತಾ, ಅವರಿಬ್ಬರನ್ನೂ ಜೀವಂತ ಹಿಡಿದು ತರಬೇಕೆಂದೇನೂ ಇಲ್ಲ. ಅವರಿಬ್ಬರಿಗೂ ಮೋಕ್ಷ ನೀಡಬೇಕು. ಅವರ ಸಾವು ಇಡೀ ಜಗತ್ತಿಗೆ ಶಾಂತಿ ತರುವುದು ಹಾಗೂ ಇದಕ್ಕಾಗಿ ಮೋದೀಜಿಯವರನ್ನು ಜನ ಯಾವತ್ತೂ ನೆನೆಪಿಸಿಕೊಳ್ಳುತ್ತಾರೆ,’’ಎಂದು ರಾಮದೇವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಗ್ರಹಿಸುವ ತನ್ನ ನೀತಿಯಲ್ಲಿ ಕೇಂದ್ರ ತಂದಿರುವ ಅಮೂಲಾಗ್ರ ಬದಲಾವಣೆಗೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ರಾಮದೇವ್, ಪಾಕ್ ಜತೆ ಮಾತುಕತೆಗಳನ್ನು ನಡೆಸಬಾರದು, ಎಂದು ಹೇಳಿದೆ.

ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ಮುಂದುವರಿಯಬಹುದಾದರೂ, ಮಾತುಕತೆಗಳಿಂದ ಏನೂ ಪ್ರಯೋಜನವಿಲ್ಲವೆಂದು ಇತಿಹಾಸ ಹಾಗೂ ಪಾಕಿಸ್ತಾನದ ಪ್ರಸಕ್ತ ಧೋರಣೆಯಿಂದ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ ಸೀಮಿತ ದಾಳಿ ನಡೆಸಿಲ್ಲವೆಂದು ವಾದಿಸುತ್ತಿರುವ ಪಾಕಿಸ್ತಾನ ‘ದೊಡ್ಡ ಸುಳ್ಳುಗಾರ’ನೆಂದೂ ರಾಮದೇವ್ ಹೇಳಿದ್ದಾರೆ. ಸೀಮಿತ ದಾಳಿಯ ಪುರಾವೆಗಳನ್ನು ಒದಗಿಸಬೇಕೆಂಬ ಬೇಡಿಕೆಗಳನ್ನೂ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರಲ್ಲದೆ ಈ ವಿಚಾರವನ್ನು ಸರಕಾರದ ವಿವೇಚನೆಗೆ ಬಿಡಬೇಕೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News