ಭಾರತದ ಮಾಜಿ ಚುನಾವಣಾ ಆಯುಕ್ತ ಹಾಗೂ ನೇಪಾಳದ ಹಾಲಿ ಚುನಾವಣಾ ಆಯುಕ್ತೆಯ ನಡುವೆ ಹೊಸ ಮೈತ್ರಿ!

Update: 2016-10-06 08:34 GMT

ಹೊಸದಿಲ್ಲಿ, ಅ.6: ಭಾರತದ ಮಾಜಿ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಹಾಗೂ ನೇಪಾಳದ ಹಾಲಿ ಚುನಾವಣಾ ಆಯುಕ್ತೆ ಇಳಾ ಶರ್ಮಾ ಅವರ ನಡುವೆ ಹೊಸ ಮೈತ್ರಿಯೊಂದು ಏರ್ಪಡಲಿದೆಯೆಂಬ ಸುದ್ದಿಯಿದೆ. ಕಳೆದ ವರ್ಷ ಮೆಕ್ಸಿಕೋದಲ್ಲಿ ನಡೆದ ಸಮಾವೇಶವೊಂದರ ಸಂದರ್ಭ ಅವರಿಬ್ಬರ ನಡುವೆ ನಡೆದ ಭೇಟಿ, ಸ್ನೇಹಕ್ಕೆ ತಿರುಗಿ ನಂತರ ಪ್ರೇಮಕ್ಕೆ ತಿರುಗಿದೆಯೆನ್ನಲಾಗಿದ್ದು ಅವರಿಬ್ಬರೂ ಇದೇ ವಾರದಲ್ಲಿ ಮದುವೆಯಾಗಲಿದ್ದಾರೆಂಬ ಮಾಹಿತಿಯಿದೆ.

ಸೆಪ್ಟೆಂಬರ್ 2015ರಂದು ಮೆಕ್ಸಿಕೋದಲ್ಲಿ ನಡೆದ ಸಮ್ಮೇಳನದಲ್ಲಿ 69 ವರ್ಷದ ಖುರೇಶಿ ಹಾಗೂ 49 ವರ್ಷದ ಶರ್ಮ ಮೊದಲು ಭೇಟಿಯಾಗಿದ್ದರು. ತಮ್ಮಿಬ್ಬರ ಸಂಬಂಧದ ಬಗ್ಗೆ ಖುರೇಶಿ ಬಹಿರಂಗವಾಗಿ ಏನೂ ಹೇಳಿಲ್ಲವಾದರೂ ತಮ್ಮಿಬ್ಬರದು ‘‘ವೈಯಕ್ತಿಕ ಬಾಂಧವ್ಯ’’ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಹಿಂದೆ ತಾವಿಬ್ಬರು ಎರಡು ಬಾರಿ ವಿವಾಹವಾಗಲು ಪ್ರಯತ್ನಿಸಿದ್ದರೂ ಯಾವುದೋ ಒಂದು ಕಾರಣದಿಂದ ಅದು ತಳ್ಳಿ ಹೋಗಿದ್ದು, ನಮ್ಮ ಮದುವೆಯ ದಿನಾಂಕ ‘‘ಊಹಾತ್ಮಕ’’ ಎಂದು ಅವರು ಹೇಳಿದ್ದಾರೆ.

ಖುರೇಶಿ ಹಾಗೂ ಶರ್ಮಾ ಅವರ ವಿವಾಹಕ್ಕೆ ಅವರಿಬ್ಬರ ಕುಟುಂಬಗಳೂ ಸ್ವಲ್ಪ ಮಟ್ಟಿಗೆ ವಿರೋಧ ಹೊಂದಿವೆ.

ವಿಚ್ಛೇದಿತರಾಗಿರುವ ಖುರೇಶಿ ಸೈಂಟ್ ಸ್ಟೀಫನ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರಲ್ಲದೆ 1971ನೆ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಪತ್ರಕರ್ತೆ ಹಾಗೂ ಅಂಕಣಕರ್ತೆ ಯಾಗಿರುವ ಹುಮ್ರಾ ಖುರೇಶಿ ಅವರ ಮೊದಲ ಪತ್ನಿಯಾಗಿದ್ದರು.

ಅತ್ತ ಶರ್ಮಾ ಅವರು ಗೋರಖಪುರ ವಿಶ್ವವಿದ್ಯಾಲಯದ ಹಾಗೂ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ, ವಾರಣಾಸಿ ಇಲ್ಲಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ. ಆಕೆ ತನ್ನ ಪತಿಯನ್ನು ಪಶ್ಚಿಮ ನೇಪಾಳದಲ್ಲಿ 15 ವರ್ಷಗಳ ಹಿಂದೆ ನಡೆದ ಮಾವೋವಾದಿಗಳ ದಾಳಿಯಲ್ಲಿ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News