ಕೆಂಬೇರಿ, ತೊಂದೆ ಮೀನು ತಿನ್ನುವಾಗ ಇರಲಿ ಎಚ್ಚರ!

Update: 2016-10-06 08:58 GMT

ಮಂಗಳೂರು, ಮಾ.6: ಮೀನು ಖಾದ್ಯ ಪ್ರಿಯರು ಕೆಂಬೇರಿ (ಲಟ್ಜನಸ್‌ಬೊಹರ್) ತೊಂದೆ (ಪಫರ್ ಫಿಶ್) ಎಂಬ ಹೆಸರಿನ ಮೀನುಗಳ ಕೆಲವು ತಳಿಗಳ ದೇಹದ ಕೆಲವು ಭಾಗಗಳಲ್ಲಿ ವಿಷಕಾರಿ ಪದಾರ್ಥಗಳು ಇರುವುದರಿಂದ ಅವುಗಳನ್ನು ತಿನ್ನದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಸಂಬಂಧಪಟ್ಟವರು ಇಂತಹ ಮೀನುಗಳು ಜನಸಾಮಾನ್ಯರಿಗೆ ತಲುಪದಂತೆ ಎಚ್ಚರಿಕೆ ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ನಿರ್ದೇಶನ ನೀಡಿದ್ದಾರೆ.

ದ.ಕ. ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆಲ ದಿನಗಳ ಹಿಂದೆ ಕೆಂಬೇರಿ ಮೀನಿನ ತಲೆ ತಿಂದ ಪರಿಣಾಮವಾಗಿ ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮೀನುಗಾರಿಕಾ ಕಾಲೇಜಿನ ತಜ್ಞರು, ವಿಜ್ಞಾನಿಗಳು, ಆರೋಗ್ಯ, ಆಹಾರ ಸುರಕ್ಷತೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮೀನು ಸಂರಕ್ಷಣಾ ಘಟಕಗಳು ಈ ಮೀನುಗಳ ಸಂರಕ್ಷಣೆಯ ಬಗ್ಗೆ ಸೂಕ್ತ ನಿಗಾವಹಿಸುವಂತೆ ಸ್ಪಷ್ಟ ಎಚ್ಚರಿಕೆ ನೀಡಿದ ಸಚಿವ ಖಾದರ್, ಯಾವುದೇ ಕಾರಣಕ್ಕೂ ಇಂತಹ ಮೀನುಗಳು ಘಟಕಕ್ಕೆ ಬರುವ ಮಧ್ಯೆ ಇತರರ ಕೈ ಸೇರಿ ಸಾರ್ವಜನಿಕರಿಗೆ ಸಿಗದಂತೆ ಎಚ್ಚರಿಕೆ ವಹಿಸಬೇಕು. ಮಾತ್ರವಲ್ಲದೆ ಸೂಕ್ತ ರೀತಿಯಲ್ಲಿ ಮೀನನ್ನು ಸಂಸ್ಕರಿಸಿ, ಮೀನಿನ ತಲೆ ಸೇರಿದಂತೆ ವಿಷಕಾರಿ ಅಂಶಗಳುಳ್ಳ ಮೀನಿನ ಭಾಗಗಳು ಕ್ಯಾಂಟೀನ್‌ಗಳ ಮೂಲಕ ಸಾರ್ವಜನಿಕರಿಗೆ ಸಿಗದಂತೆ ಎಚ್ಚರ ವಹಿಸಬೇಕು. ಜಾಗೃತಿ ಇಲ್ಲದೆ ಕಡಿಮೆ ಬೆಲೆಗೆ ಸಿಗುವ ಈ ಮೀನಿನ ಭಾಗಗಳನ್ನು ಬಡ ಸಾರ್ವಜನಿಕರು ಖರೀದಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಪ್ರಸಕ್ತ ನಡೆದ ಘಟನೆಯಿಂದ ತಿಳಿದು ಬಂದಿದೆ. ಹಾಗಾಗಿ ಮುಂದೆ ಇಂತಹ ಘಟನೆಗಳು ಕಂಡು ಬಂದಲ್ಲಿ, ಸಂಬಂಧಪಟ್ಟ ಸಂಸ್ಕರಣಾ ಘಟಕಗಳನ್ನೇ ಜವಾಬ್ಧಾರನ್ನಾಗಿಸಲಾಗುವುದು. ಈಗಾಗಲೇ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರ ಆಸ್ಪತ್ರೆ ಶುಲ್ಕವನ್ನು ಮೀನು ಸಂಸ್ಕರಣಾ ಘಟಕಗಳವರೇ ಭರಿಸಬೇಕು ಎಂದು ಸಚಿವ ಖಾದರ್ ತಾಕೀತು ಮಾಡಿದರು.

ಆಹಾರ ಮತ್ತು ಸುರಕ್ಷತೆ ಹಾಗೂ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಈ ಮೀನುಗಳ ಕುರಿತಂತೆ ಸಂಪೂರ್ಣ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಚಿವರು ಸಭೆಯಲ್ಲಿ ಸೂಚನೆ ನೀಡಿದರು.

ದಕ್ಷಿಣ ಆಫ್ರಿಕಾ ಸಮುದ್ರದಲ್ಲಿ ಹಿಡಿಯಲ್ಪಟ್ಟ ಕೆಂಬೇರಿಯಲ್ಲಿ ಟಾಕ್ಸಿನ್ ಪತ್ತೆ!

ದ.ಕ. ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆಲ ದಿನಗಳ ಹಿಂದೆ ಕೆಂಬೇರಿ ಮೀನಿನ ತಲೆ ತಿಂದ ಪರಿಣಾಮವಾಗಿ ಕೆಲವರು ಅಸ್ವಸ್ಥರಾಗಿರುವ ಕುರಿತಂತೆ ತನಿಖೆ ನಡೆಯುತ್ತಿದ್ದು, ಅವರು ಸೇವಿಸಿದ ಮೀನು ದಕ್ಷಿಣ ಆಫ್ರಿಕಾದ ಆಳ ಸಮುದ್ರದ ಮೀನುಗಾರಿಕೆಯ ವೇಳೆ ಹಿಡಿಯಲ್ಪಟ್ಟವುಗಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಮೀನು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಮೀನು ಎಲ್ಲಿಂದ ತರಲಾಗಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಎಂದು ಮರೈನ್ ಅಥಾರಿಟಿಯ ಅಧಿಕಾರಿ ಅಶೋಕ್ ಕುಮಾರ್ ಸಭೆಯಲ್ಲಿ ತಿಳಿಸಿದರು.

ಕೆಲವೊಂದು ವಿಧದ ಮೀನಿನ ಕೆಲ ತಳಿಗಳಲ್ಲಿ ಮಾತ್ರ ಟಾಕ್ಸಿನ್ ಪತ್ತೆ

ಕೆಲವೊಂದು ವಿಧದ ಮೀನುಗಳ ಕೆಲ ತಳಿಗಳಲ್ಲಿ ಮಾತ್ರವೇ ಟಾಕ್ಸಿನ್ ಅಂಶ (ವಿಷ ಪದಾರ್ಥ)ಗಳಿರುತ್ತವೆ. 1979ರಲ್ಲಿ ಮುಂಬೈನಲ್ಲಿಯೂ ಈ ಅಂಶ ಪತ್ತೆಯಾಗಿತ್ತು. ಭೌಗೋಳಿಕ ತಾಪಮಾನ, ನಿರ್ದಿಷ್ಟ ಅವಧಿಗಳಲ್ಲಿ ಮಾತ್ರವೇ ಈ ಟಾಕ್ಸಿನ್ ಕೆಲವೊಂದು ಮೀನಿನ ತಳಿಗಳಲ್ಲಿ ಮಾತ್ರವೇ ಪತ್ತೆಯಾಗಿವೆ. ನಮ್ಮ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರು ಕನ್ಯಾಕುಮಾರಿಯಿಂದ ಇನ್ನೂ ದೂರಕ್ಕೆ ಆಳ ಸಮುದ್ರದ ಮೀನುಗಾರಿಕೆಗೆ ತೆರಳುವುದರಿಂದ ಕೆಲವೊಂದು ದ್ವೀಪ ಪ್ರದೇಶಗಳಲ್ಲಿ, ಹವಳಗಳಿರುವ ಸಮುದ್ರದಲ್ಲಿರುವ ಕೆಲವೊಂದು ನಿರ್ದಿಷ್ಟ ಮೀನುಗಳಲ್ಲಿ ಇಂತಹ ವಿಷಕಾರಿ ಅಂಶಗಳು ಇರುತ್ತವೆ. ಭಾರತೀಯ ಸಮುದ್ರದಲ್ಲಿ ಇಂತಹ ವಿಷಕಾರಿ ಅಂಶಗಳುಳ್ಳ ಮೀನುಗಳು ಅಪರೂಪ ಎಂದು ಹಿರಿಯ ವಿಜ್ಞಾನಿ ಡಾ. ಕರುಣಾ ಸಾಗರ್ ಸಭೆಯಲ್ಲಿ ಅಭಿಪ್ರಾಯಿಸಿದರು.

ಕೆಲವೊಂದು ನಿರ್ದಿಷ್ಟ ಮೀನುಗಳ ಕೆಲ ತಳಿಗಳಲ್ಲಿ ಮಾತ್ರವೇ ಕಂಡು ಬರುವ ಈ ವಿಷಕಾರಿ ಅಂಶಗಳು ಕೆಲವೊಂದು ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಕಂಡು ಬರುತ್ತದೆ. ಇದಕ್ಕೆ ಭೌಗೋಳಿಕ ಹವಮಾನವೂ ಕಾರಣವಾಗಿರಬಹುದು. ಮುಖ್ಯವಾಗಿ ಹವಳ ಉತ್ಪತ್ತಿಯಾಗುವ ಪ್ರದೇಶಗಳಲ್ಲಿನ ಮೀನುಗಳಲ್ಲಿ ಟಾಕ್ಸಿನ್ ಅಂಶಗಳು ಕಂಡು ಬರುತ್ತವೆ ಎಂದು ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮಂಗಳೂರು ಘಟಕದ ವಿಜ್ಞಾನಿ ಡಾ. ಪ್ರತಿಭಾ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ ಡಾ. ವೇಣು ಗೋಪಾಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಡಾ. ರಾಜೇಶ್ ಉಪಸ್ಥಿತರಿದ್ದರು.

ಎಚ್ಚರ ವಹಿಸದಿದ್ದರೆ ಮೀನು ಸಂಸ್ಕರಣಾ ಘಟಕಕ್ಕೆ ಬೀಗ: ಜಿಲ್ಲಾಧಿಕಾರಿ

ಕೆಲವೊಂದು ಜಾತಿಯ ಮೀನಿನಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿರುವುದರಿಂದ ಆ ಮೀನುಗಳ ಸಂಸ್ಕರಣೆಯ ಬಗ್ಗೆ ಜಿಲ್ಲೆಯ ಮೀನು ಸಂಸ್ಕರಣಾ ಘಟಕಗಳು ಹೆಚ್ಚಿನ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಆ ಮೀನಿನ ವಿಷಕಾರಿ ಭಾಗಗಳು ಸಾರ್ವಜನಿಕರ ಕೈ ಸೇರದಂತೆ ಎಚ್ಚರಿಕೆ ವಹಿಸಬೇಕು. ವಿಷಕಾರಿ ಅಂಶಗಳಿರಬಹುದಾದ ಅಂತಹ ಮೀನಿನ ನಿರ್ದಿಷ್ಟ ಭಾಗಗಳನ್ನು ಘಟಕಗಳು ಸಂಸ್ಕರಿಸಿ ಕೇವಲ ಫರ್ಟಿಲೈಸರ್ ಆಗಿ ಮಾತ್ರವೇ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಅವುಗಳು ಕ್ಯಾಂಟೀನ್‌ಗಳಿಗೂ ಹೋಗದಂತೆ ಗಮನ ಹರಿಸಬೇಕು. ಈ ಮುಂಜಾಗ್ರತಾ ಕ್ರಮಗಳನ್ನು ವಹಿಸದಿದ್ದಲ್ಲಿ, ಅಂತಹ ಮೀನು ಸಂಸ್ಕರಣಾ ಘಟಕಗಳನ್ನು ನಿರ್ದಾಕ್ಷಿಣ್ಯವಾಗಿ ಮುಂದಿನ ದಿನಗಳಲ್ಲಿ ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಜಗದೀಶ್ ಸಭೆಯಲ್ಲಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News