ಪುರೋಹಿತಶಾಹಿ ವ್ಯವಸ್ಥೆ ಯುವಜನತೆಯ ದಾರಿ ತಪ್ಪಿಸುತ್ತಿದೆ: ಡಾ.ಎಲ್. ಹನುಮಂತಯ್ಯ

Update: 2016-10-06 11:46 GMT

ಕೊಣಾಜೆ, ಅ.6: ಪುರೋಹಿತಶಾಹಿ ವ್ಯವಸ್ಥೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಲ್ಲ. ಅದು ಮುಸ್ಲಿಂ, ಕ್ರಿಶ್ಚಿಯನ್ ಧರ್ಮದಲ್ಲೂ ಇದೆ. ಪ್ರಸ್ತುತ ಪುರೋಹಿತಶಾಹಿ ಯುವಜನತೆಯ ದಾರಿ ತಪ್ಪಿಸುತ್ತಿದೆ. ಎಲ್ಲಿಯರೆಗೆ ಯುವಜನತೆ ಪುರೋಹಿತಶಾಹಿ ಪರಿಕಲ್ಪನೆ ಒಡೆಯದೆ, ಭೇದಿಸದೆ ಅದರ ವೈಚಾರಿಕ ಮುಖ ನೋಡಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ನಾವು ಜೇಡರಬಲೆಯಲ್ಲಿ ಸಿಕ್ಕಿಬಿದ್ದ ಹಾಗೆ ನಮ್ಮ ಬದುಕು ಸಾಗುತ್ತದೆ ಎಂಬ ವಿಚಾರಧಾರೆಗಳನ್ನು ಕುವೆಂಪು ಅವರ ಸಾಹಿತ್ಯದಲ್ಲಿ ಮನಗಾಣಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದೊಂದಿಗೆ ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ‘ವಿಶ್ವಾತ್ಮಕತೆ-ಕುವೆಂಪು ಕಾಣ್ಕೆ’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಕಾಲದ ಅಗತ್ಯತೆಗೆ ಅನುಗುಣವಾಗಿ ಚರ್ಚಿಸುವ ಸಕಾಲ ಇದು. ಜಾಗತೀಕರಣದ ಸವಾಲಿನ ಜೊತೆಗೆ ಬಹಳ ದೂರ ಸಾಗಿದ್ದೇವೆ. ಅದರ ಒಳಿತು ಕೆಡುಕುಗಳ ಬಗ್ಗೆ ಮೌಲ್ಯಮಾಪನ ಮಾಡುವ ಅನಿವಾರ್ಯ ಘಟ್ಟದಲ್ಲಿ ನಾವಿದ್ದೇವೆ. ಅಭಿವೃದ್ಧಿ ಎಂಬುದು ಎಲ್ಲ ರಾಜಕೀಯ ಪಕ್ಷಗಳ ಮಂತ್ರವಾಗಿ ತನ್ನ ರಾಗ ಎಳೆಯುತ್ತಿದೆ. ರಾಷ್ಟ್ರೀಯವಾದದ ಕಲ್ಪನೆ ಯಾವ ಹಂತಕ್ಕೆ ತಲುಪಿದೆಯೆಂದರೆ ಒಬ್ಬ ವ್ಯಕ್ತಿ ಹಸಿವು, ದುಖ, ನೋವಿನಲ್ಲಿದ್ದಾಗ ಯಾರಾದರೂ ಭಾರತ ಮಾತೆಗೆ ಜೈ ಎಂದಾಗ ಅದಕ್ಕೆ ಧ್ವನಿಗೂಡಿಸದಿದ್ದರೆ ದೇಶದ್ರೋಹಿಗಳು ಎಂದು ಬಿಂಬಿತವಾಗುವ ಸಂದಿಗ್ಧತೆಯಲ್ಲಿ ನಾವಿದ್ದೇವೆ ಎಂದು ತಿಳಿಸಿದರು.

ಭಾರತದ ಮೂರನೆ ಒಂದು ಭಾಗದಷ್ಟು ಜನರು ಹಸಿವಿನಿಂದ ಇನ್ನಿತರ ಮೂಲಭೂತ ಸಮಸ್ಯೆಯಿಂದ ಬಳಲುವವರೇ ಆಗಿದ್ದಾರೆ. ಇವರಿಗೆ ಬೇಕಾದ ರಾಷ್ಟ್ರೀಯವಾದ ಯಾವುದು? ಆದರೆ ಇಂದು ಅಭಿವೃದ್ಧಿಯ ಹೆಸರಿನಲ್ಲಿ ರಾಜಕೀಯ ವ್ಯಕ್ತಿಗಳ ಹೊಸರಾಷ್ಟ್ರೀಯವಾದದ ಕಲ್ಪನೆಯನ್ನು ಹುಟ್ಟು ಹಾಕುತ್ತಿದ್ದಾರೆ. ರಾಷ್ಟ್ರೀಯವಾದ ಎಂಬುದು ಒಬ್ಬ ವ್ಯಕ್ತಿಯ ಹಸಿವು, ಸೂರು ಸೇರಿದಂತೆ ಮೂಲ ಅವಶ್ಯಕತೆಗಳನ್ನು ಈಡೇರಿಸುವ ನೋವನ್ನು ದೂರಮಾಡುವ ಬಗ್ಗೆ ಚರ್ಚಿಸಿದರೆ ಮಾತ್ರ ಅದು ಆತನಿಗೆ ಸಂಬಂಧಪಟ್ಟ ರಾಷ್ಟ್ರೀಯವಾದವಾಗುತ್ತದೆ. ಅದನ್ನು ಮರೆಮಾಚಿ ಹುಸಿ ರಾಷ್ಟ್ರೀಯವಾದದ ಕುರಿತು ಮಾತನಾಡಿದರೆ ಹಸಿವು ನೀಗಿಸಲು ಸಾಧ್ಯವಿಲ್ಲದವರು, ನೋವುಂಡವರು ಹಾಗೂ ಮೂಲ ಅವಶ್ಯಕತೆಗಳನ್ನು ಪಡೆಯಲು ಸಾಧ್ಯವಾಗದವರಿಗೆ ಅದು ಪಥ್ಯವಾಗದು, ಅದೊಂಥರ ಅಪಹಾಸ್ಯವಾದಂತೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಲೋಕದಲ್ಲಿ ಕುವೆಂಪು ಅವರ ಬಗೆಗೆ ಬಂದಷ್ಟು ವಿಮರ್ಶಾ ಗ್ರಂಥ ಬೇರೆ ಯಾವ ಸಾಹಿತಿಯ ಕುರಿತಾಗಿ ಬಂದಿಲ್ಲ. ಕುವೆಂಪು ಅವರು ಹೆಸರು, ಒಬ್ಬನ ಮನಸ್ಸಿಗೆ ವಿನೋದ ಕೊಡುತ್ತದೆಯೋ ಅಥವಾ ಕವಿತ್ವಕ್ಕಾಗಿ ಕವಿತೆ ಬರೆಯಲಿಲ್ಲ. ಅವರ ಪ್ರಕಾರ ಕವಿ ಬೇಸರ ಪರಿಹಾರ ಮಾಡುವ ವಿದೂಷಕನಲ್ಲ. ಅವರ ಮೂಲ ವಾದವೇ ಜನಜೀವನವಿಲ್ಲದ ಸಾಹಿತ್ಯ ಸಾಹಿತ್ಯವಲ್ಲ. ಸಾಹಿತ್ಯವನ್ನು ಚಿನ್ನದ ಗಣಿಯಿಂದ ಟನ್‌ಗಟ್ಟಲೆ ಅದಿರು ತೆಗೆದು ಅದರಿಂದ ಸಂಗ್ರಹವಾಗುವ ಕಿಂಚಿತ್ತು ಚಿನ್ನದ ರೀತಿಯಲ್ಲಿ ಸಾಹಿತ್ಯವನ್ನು ನಮ್ಮ ವಿಚಾರಧಾರೆಗಳಿಂದ ಅಧ್ಯಯನದಿಂದ ವಿಮರ್ಶಾತ್ಮಕವಾಗಿ ಕಟ್ಟಿಕೊಡಬೇಕು ಎಂಬ ನಂಬಿಕೆ ಹೊಂದಿದ್ದರು ಎಂದರು.

ಕುವೆಂಪು ಅವರು ತನ್ನ ಪರಂಪರೆಯ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಅವರ ಪದ್ಯದ ನಿರ್ದಿಷ್ಟ ಸಾಲನ್ನು ಓದಿದಾಗ ಮನುಷ್ಯನ ಜನಜೀವನದ ಜೊತೆ ಸಂಘರ್ಷವಾಗುವ ಸಾಹಿತ್ಯ ಕಾಣಬಹುದಿತ್ತು. ಪ್ರಕೃತಿ ಕವಿ ಎಂಬ ಬಿರುದಾಂಕಿತ ಕುವೆಂಪು ಮನುಷ್ಯ ಮಾತ್ರವಲ್ಲದೆ ಮಲೆನಾಡಿನ ಎಲ್ಲ ಜೀವರಾಶಿಯ ಬಗೆಗೆ ತನ್ನದೇ ಆದ ಪ್ರೀತಿ ಹೊಂದಿದ್ದರು. ಹಾಗಾಗಿ ಅವರು ನಮಗೆ ದಾರ್ಶನಿಕರಾಗಿ ಕಾಣುತ್ತಾರೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಲಪತಿ ಪ್ರೊ.ಕೆ. ಭೈರಪ್ಪ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು ಅವರ ಸಾಹಿತ್ಯ ವಿಶ್ವದ ಎಲ್ಲ ಭಾಗಕ್ಕೂ ಮುಟ್ಟಬೇಕಿದೆ. ಅವರ ಸಾಹಿತ್ಯ ಕೃಷಿ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತು ನಮ್ಮ ದೇಶಕ್ಕೆ ದೊಡ್ಡ ಕೊಡುಗೆ. ಅವರು ರಾಷ್ಟ್ರಕವಿ ಮಾತ್ರವಲ್ಲ ಅವರು ವಿಶ್ವಕವಿಯಾಗಬೇಕಿತ್ತು. ಅವರ ಸಾಹಿತ್ಯ ನೋಬೆಲ್ ಸಾಹಿತ್ಯ ಪ್ರಶಸ್ತಿಗೆ ಎಲ್ಲ ವಿಧದಲ್ಲೂ ಅರ್ಹತೆ ಪಡೆದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ರಹಮತ್ ತರಿಕೆರೆ, ಪ್ರೊ. ಉಷಾ ಎಂ., ಶಿವಮೊಗ್ಗ ತುಂಗಾ ಕಾಲೇಜಿನ ಪ್ರೊ.ಎಲ್.ಸಿ. ಸುಮಿತ್ರ ಹಾಗೂ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪ್ರೊ. ರಾಜಾರಾಮ ಹೆಗಡೆ ವಿಚಾರ ಮಂಡಿಸಿದರು.

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೆೊ. ಬಿ.ಶಿವರಾಮ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ವಿಭಾಗದ ಹಳೆ ವಿದ್ಯಾರ್ಥಿನಿ ಶ್ರೀದೇವಿ ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಹಾಗೂ ಓ ನನ್ನ ಚೇತನಾ ಆಗು ನೀ ಅನಿಕೇತನ ಮೊದಲಾದ ಗೀತೆಯನ್ನು ಹಾಡಿದರು.

ಈ ದೇಶಕ್ಕೆ ಗೋವಿನ ರಫ್ತಿನಿಂದಾಗುವ ಆದಾಯದ ಬಗ್ಗೆ ಮಾತನಾಡದವರು ಗೋವನ್ನು ಬೀದಿ ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. ಗೋವಿನ ಸೆಗಣಿ ಮುಟ್ಟದವರು, ಗಂಜಲ ಮುಟ್ಟದವರು, ಗೋವನ್ನು ಸಾಕದವರು ಗೋವಿನ ಕುರಿತಾಗಿ ರಾಜಕೀಯ ಮಾಡುತ್ತಾ ವಿಚಾರ ಮಂಡಿಸುತ್ತಾ ಸಾಮರಸ್ಯ ಕದಡುತ್ತಿರುವುದು ದುರಂತ. ತಿನ್ನುವ ತಿನಿಸು ಇಂತಹದ್ದೇ ತಿನ್ನಬೇಕು ಎಂದು ಅದೇಶಿಸುವ ಜನರ ಮಧ್ಯೆ ಈ ದೆಶದ ಜನರ ನಡುವೆ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಪರಸ್ಪರ ಪ್ರೀತಿ ವಿಶ್ವಾಸದ ನಡುವೆ ಕಂದಕ ನಿರ್ಮಾಣವಾಗುವ ಅಪಾಯ ಅರಿಯಬೇಕು ಎಂದರು.

ಡಾ.ಎಲ್.ಹನುಮಂತಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News