×
Ad

ರಣಜಿ ಟ್ರೋಫಿ: ಮೊದಲ ದಿನವೇ ತಮಿಳುನಾಡು, ಗೋವಾ ಆಲೌಟ್

Update: 2016-10-06 22:59 IST

ರಾಂಚಿ, ಅ.6: ಎಂಭತ್ತಮೂರನೆ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿ ಗುರುವಾರ ಆರಂಭವಾಗಿದ್ದು, ಮೊದಲ ದಿನದಾಟದಲ್ಲೇ ತ್ರಿಪುರಾ, ಗೋವಾ, ಮಹಾರಾಷ್ಟ್ರ ಹಾಗೂ ತಮಿಳುನಾಡು ತಂಡಗಳು ಆಲೌಟಾಗಿವೆ.

ರೋಹ್ಟಕ್‌ನಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ತಮಿಳುನಾಡು ತಂಡ ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಕೇವಲ 87 ರನ್‌ಗೆ ಆಲೌಟಾಯಿತು. ಮುಂಬೈ ದಿನದಾಟದಂತ್ಯಕ್ಕೆ 85 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ರಾಂಚಿಯಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ತ್ರಿಪುರಾ ತಂಡ ಚೊಚ್ಚಲ ಟೂರ್ನಿಯನ್ನು ಆಡುತ್ತಿರುವ ಛತ್ತೀಸ್‌ಗಡದ ವಿರುದ್ಧ 118 ರನ್‌ಗೆ ಆಲೌಟಾಗಿದೆ. ಛತ್ತೀಸ್‌ಗಡ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ.

ಹೈದರಾಬಾದ್‌ನಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಗೋವಾ ತಂಡ ಹೈದರಾಬಾದ್‌ನ ವಿರುದ್ಧ 164 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದೆ. ದಿಲ್ಲಿಯಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಜಾರ್ಖಂಡ್‌ನ ವಿರುದ್ಧ 210 ರನ್‌ಗೆ ಆಲೌಟಾಗಿದೆ. ಜಾರ್ಖಂಡ್ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿದೆ.

ಸ್ಯಾಮ್ಸನ್ ಔಟಾಗದೆ 129, ಸುಸ್ಥಿತಿಯಲ್ಲಿ ಕೇರಳ

ಕಲ್ಯಾಣಿ: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಬಾರಿಸಿದ ಅಜೇಯ ಶತಕ(129)ದ ನೆರವಿನಿಂದ ಕೇರಳ ತಂಡ ಜಮ್ಮು-ಕಾಶ್ಮೀರದ ವಿರುದ್ಧ 7 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿದೆ.

ತಂಡ 9 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗಿಳಿದ ಸ್ಯಾಮ್ಸನ್, ಜಲಜ್ ಸಕ್ಸೇನಾರೊಂದಿಗೆ(69ರನ್) 3ನೆ ವಿಕೆಟ್‌ಗೆ 97 ರನ್ ಜೊತೆಯಾಟ ನಡೆಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಪ್ರಶಾಂತ್ ಚೋಪ್ರಾ ಹಾಗೂ ಸುಮೀತ್ ವರ್ಮ ಬಾರಿಸಿದ ಶತಕದ ಬೆಂಬಲದಿಂದ ಹಿಮಾಚಲ ಪ್ರದೇಶ ತಂಡ ಆಂಧ್ರದ ವಿರುದ್ಧ 7 ವಿಕೆಟ್‌ಗೆ 317 ರನ್ ಗಳಿಸಿದೆ.

ತ್ರಿಪುರಾವನ್ನು 118 ರನ್‌ಗೆ ಆಲೌಟ್ ಮಾಡಿದ ಛತ್ತೀಸ್‌ಗಡ ತಂಡ ರಣಜಿ ಪಂದ್ಯದಲ್ಲಿ ಶುಭಾರಂಭ ಮಾಡಿದೆ. ಛತ್ತೀಸ್‌ಗಡದ 5 ಬೌಲರ್‌ಗಳಲ್ಲಿ ನಾಲ್ವರು ಚೊಚ್ಚಲ ರಣಜಿ ಪಂದ್ಯ ಆಡಿದ್ದು, ಎಡಗೈ ಸ್ಪಿನ್ನರ್ ಅಜಯ್ ಮಂಡಳ್(3-41) ಯಶಸ್ವಿ ಬೌಲರ್ ಎನಿಸಿಕೊಂಡರು.

ಮಧ್ಯಮ ವೇಗಿ ಮುಹಮ್ಮದ್ ಸಿರಾಜ್(4-14) ದಾಳಿಗೆ ಸಿಲುಕಿದ ಗೋವಾ ತಂಡ ಹೈದರಾಬಾದ್‌ನ ವಿರುದ್ಧ 164 ರನ್‌ಗೆ ಆಲೌಟಾಯಿತು.

ತಮಿಳುನಾಡು ತತ್ತರ: ಏಕದಿನ ತಂಡಕ್ಕೆ ಕರೆ ಪಡೆದಿರುವ ಮುಂಬೈ ವೇಗಿ ಧವಳ್ ಕುಲಕರ್ಣಿ(4-31) ಹಾಗೂ ತುಷಾರ್ ದೇಶಪಾಂಡೆ(4-25) ದಾಳಿಗೆ ತತ್ತರಿಸಿದ ತಮಿಳುನಾಡು ತಂಡ ಕೇವಲ 87 ರನ್‌ಗೆ ಆಲೌಟಾಯಿತು. ಇಂದ್ರಜಿತ್(28) ಸರ್ವಾಧಿಕ ರನ್ ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News