2018ರ ಅಂತ್ಯದೊಳಗೆ ಇಂಡೊ-ಪಾಕ್ ಗಡಿಬಂದ್: ರಾಜನಾಥ್
ಹೊಸದಿಲ್ಲಿ, ಅ.7: ಗಡಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಅಲ್ಲಿನ ಭದ್ರತಾ ಪರಿಸ್ಥಿತಿಯ ಪರಾಮರ್ಶೆ ನಡೆಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, 2018ರೊಳಗೆ ಭಾರತ-ಪಾಕ್ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದೆಂದು ಹೇಳಿದ್ದಾರೆ.
ಇದು ಕಾಲಬದ್ಧವಾಗಿರುತ್ತದೆ. 2018ರ ಡಿಸೆಂಬರ್‌ನೊಳಗಾಗಿ ಅದನ್ನು ಮಾಡಲಾಗುವುದು. ತಾವು ಕಾರ್ಯ ಯೋಜನೆಯನ್ನು ಸಿದ್ಧಪಡಿಸುತ್ತಿದ್ದೇವೆಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದ ಸಭೆಯೊಂದರ ಬಳಿಕ ಅವರು ತಿಳಿಸಿದರು.
ಸದ್ಯವೇ ಗಡಿಭದ್ರತಾ ಜಾಲವೊಂದನ್ನು ಸ್ಥಾಪಿಸಲಾಗುವುದು. ಗಡಿ ರಕ್ಷಣೆಗೆ ತಾಂತ್ರಿಕ ಪರಿಹಾರದ ಕುರಿತಾಗಿಯೂ ತಾವು ಚಿಂತನೆ ನಡೆಸುತ್ತಿದ್ದೇವೆಂದು ರಾಜನಾಥ್ ಹೇಳಿದರು.
ಸರಣಿ ಕದನ ವಿರಾಮ ಉಲ್ಲಂಘನೆ, ಒಳ ನುಸುಳುವಿಕೆ ಯತ್ನ ಹಾಗೂ ಗಡಿಯಾಚೆಯಿಂದ ದಾಳಿಗಳ ಕಾರಣ ಪಾಕಿಸ್ತಾನದೊಂದಿಗೆ ಹೆಚ್ಚಿರುವ ಉದ್ವಿಗ್ನತೆಯ ನಡುವೆಯೇ ಭದ್ರತೆಯ ಪರಾಮರ್ಶೆಗಾಗಿ ಗೃಹ ಸಚಿವ ಭಾರತದ ಪಶ್ಚಿಮದ ಗಡಿಗೆ 2 ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಅವರು ರಾಜಸ್ಥಾನದಲ್ಲಿನ 1,048 ಕಿ.ಮೀ. ಪಾಕಿಸ್ತಾನದೊಂದಿಗಿನ ಗಡಿಯಲ್ಲಿರುವ ಸೇನಾ ಹೊರ ಠಾಣೆಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.
ರಾಜಸ್ಥಾನ, ದಿಲ್ಲಿ, ಪಂಜಾಬ್, ಜಮ್ಮು-ಕಾಶ್ಮೀರ ಹಾಗೂ ಗುಜರಾತ್‌ಗಳ ವಿಮಾನ ನಿಲ್ದಾಣಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಂಭವವಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆಯೆಂದು ಎನ್‌ಡಿಟಿವಿ ಗುರುವಾರ ವರದಿ ಮಾಡಿತ್ತು. ನಾಲ್ಕು ರಾಜ್ಯಗಳ 22 ವಿಮಾನ ನಿಲ್ದಾಣಗಳಿಗೆ ವಿವರವಾದ ಮುನ್ನೆಚ್ಚರಿಕೆ ನೀಡಲಾಗಿದ್ದು, ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.